ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಾಕಿ ಅನುದಾನ ಬಿಡುಗಡೆ ಮಾಡಿ : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ

KannadaprabhaNewsNetwork |  
Published : Aug 31, 2024, 01:46 AM ISTUpdated : Aug 31, 2024, 10:11 AM IST
ಪಾಲಿಕೆಯ ಬಾಕಿ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಪಾಲಿಕೆ ಮೇಯರ್‌ ರಾಮಣ್ಣ ಬಡಿಗೇರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬಿಬಿಎಂಪಿ ಮಾದರಿಯಲ್ಲಿ ಹು-ಧಾ ಮಹಾನಗರ ಪಾಲಿಕೆಗೂ ಆಸ್ತಿಕರ ಒಂದು ಸಾರಿ ಹೊಂದಾಣಿಕೆಗೆ (ಒಟಿಎಸ್‌) ಕರದಾರರಿಗೆ ಅವಕಾಶ ಮಾಡಿಕೊಡಬೇಕು. ನೀರಿನ ಕರ ಬಾಕಿ ವಸೂಲಾತಿಗೆ ಮತ್ತೊಂದು ಬಾರಿ ಒಟಿಎಸ್‌ಗೆ ಅನುಮತಿ ನೀಡಬೇಕು ಎಂದು ಮೇಯರ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ:  ಹು-ಧಾ ಮಹಾನಗರ ಪಾಲಿಕೆಯ ಬಾಕಿ ಅನುದಾನ ಬಿಡುಗಡೆ, ಅಭಿವೃದ್ಧಿಪರ ಕಡತಗಳಿಗೆ ಅನುಮೋದನೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇಯರ್‌ ರಾಮಪ್ಪ ಬಡಿಗೇರ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಬಿಬಿಎಂಪಿ ಮಾದರಿಯಲ್ಲಿ ಹು-ಧಾ ಮಹಾನಗರ ಪಾಲಿಕೆಗೂ ಆಸ್ತಿಕರ ಒಂದು ಸಾರಿ ಹೊಂದಾಣಿಕೆಗೆ (ಒಟಿಎಸ್‌) ಕರದಾರರಿಗೆ ಅವಕಾಶ ಮಾಡಿಕೊಡಬೇಕು. ನೀರಿನ ಕರ ಬಾಕಿ ವಸೂಲಾತಿಗೆ ಮತ್ತೊಂದು ಬಾರಿ ಒಟಿಎಸ್‌ಗೆ ಅನುಮತಿ ನೀಡಬೇಕು. ಪಾಲಿಕೆ ನಿವೃತ್ತ ನೌಕರರ ₹ 58 ಕೋಟಿ ಪಿಂಚಣಿ ಹಣ ಬಾಕಿ ಇದ್ದು, ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.ಪಾಲಿಕೆ ಚುನಾಯಿತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ, ನೂತನ ಸಭಾಭವನ ಕಟ್ಟಡ ನಿರ್ಮಾಣಕ್ಕೆ ₹ 30 ಕೋಟಿಗಳ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಗೊಳಿಸಬೇಕು. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಅಡಿ ಬಿಡುಗಡೆಯಾದ ಹಣದಲ್ಲಿ ಇನ್ನೂ ₹ 48 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಪಾಲಿಕೆ ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಠರಾವು ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆಯಲ್ಲಿ 2,745 ಲೀಸ್ ಆಸ್ತಿಗಳು ಇದ್ದು, ಭೂ ಬಾಡಿಗೆ ಮುಂದುವರಿಸುವ ಅಥವಾ ಮಾರುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ನಿರ್ಣಯ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವುದರಿಂದ ಪಾಲಿಕೆ ಆದಾಯ ಕುಂಠಿತಗೊಂಡಿದೆ. ಶೀಘ್ರ ಸಮರ್ಪಕ ನಿರ್ಧಾರ ಪ್ರಕಟಿಸಬೇಕು. ಸರ್ಕಾರದಿಂದ ಬಿಡುಗಡೆಗೊಂಡಿರುವ 1, 2 ಮತ್ತು 3ನೇ ಹಂತದ ₹100 ಕೋಟಿ ಅನುದಾನದಲ್ಲಿ ಇನ್ನೂ ₹ 54 ಕೋಟಿ ಬಿಡುಗಡೆಯಾಗಿಲ್ಲ. ಬಾಕಿ ಹಣ ಶೀಘ್ರ ಬಿಡುಗಡೆಗೊಳಿಸಬೇಕು. ಘನತ್ಯಾಜ್ಯ ನಿರ್ವಹಣೆಗೆ ಪೌರ ಕಾರ್ಮಿಕರ ಕೊರತೆ ಇದ್ದು, 799 ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇಗ ಕಡತ ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ಪಾಲಿಕೆ ಉಪಮೇಯರ್‌ ದುರ್ಗಮ್ಮ ಬಿಜವಾಡ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!