ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಹೊರವಲಯದ ಸೂಳೆಕೆರೆಗೆ ಹೇಮಾವತಿ ಮುಖ್ಯ ಕಾಲುವೆಯಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣವನ್ನು ಶನಿವಾರ ಖುದ್ದು ವೀಕ್ಷಣೆ ಮಾಡಿದ ಸಚಿವರು, ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.
ಜನ-ಜಾನುವಾರುಗಳಿಗೆ ಅನುಕೂಲವಾಗುವಂತೆ ಹಾಗೂ ಅಂತರ್ಜಲ ಹೆಚ್ಚಿಸಲು ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕಿದೆ. ಆದರೆ, ಹೇಮಾವತಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮೊದಲ ಆದ್ಯತೆಯಾಗಿ ಪಟ್ಟಣದ ಜನರಿಗೆ ಕುಡಿವ ನೀರು ಪೂರೈಸುವ ಸೂಳೆಕೆರೆಯನ್ನು ತುಂಬಿಸಿದ ನಂತರ ಇನ್ನುಳಿದ ಕೆರೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದರು.37.10 ಟಿಎಂಸಿ ಸಾಮರ್ಥ್ಯವಿರುವ ಹೇಮಾವತಿ ಜಲಾಶಯದಲ್ಲಿ ಇಂದಿಗೆ 17.51ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ 14 ಟಿಎಂಸಿ ನೀರನ್ನು ಮಾತ್ರ ಕುಡಿಯುವ ಹಾಗೂ ನಾಲೆಗಳಿಗೆ ಹರಿಸಬಹುದಾಗಿದೆ. ಇಂದು ಜಲಾಶಯಕ್ಕೆ 1791 ಕ್ಯುಸೆಕ್ ನೀರು ಹರಿದುಬರುತ್ತಿದೆ. 9300 ಕ್ಯುಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಹಾಗಾಗಿ ಮುಖ್ಯ ಕಾಲುವೆ ಮೂಲಕ ತಾಲೂಕಿಗೆ ಹರಿದುಬರುವ ನೀರನ್ನು ಪೋಲು ಮಾಡದಂತೆ ಸೂಳೆಕೆರೆ ತುಂಬಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ರೀತಿ ನಾಲೆಯಲ್ಲಿ ನಿರಂತರವಾಗಿ ನೀರು ಹರಿಯುವ ಜೊತೆಗೆ ಈ ಪ್ರದೇಶದಲ್ಲಿ ಮಳೆಯಾದರೆ ಮುಂದಿನ 15 ದಿನಗಳಲ್ಲಿ ಸೂಳೆಕೆರೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಸೂಳೆಕೆರೆಯನ್ನು ತುಂಬಿಸುವ ಸಲುವಾಗಿ ಹಗಲು ರಾತ್ರಿ ಎನ್ನದೆ ತಾಲೂಕಿನ ಗಡಿವರೆಗೂ ನಾಲೆಗಳ ಮೇಲೆ ಸಂಚರಿಸಿ ನೀರು ಪೋಲಾಗದಂತೆ ಎಚ್ಚರವಹಿಸಲಾಗುತ್ತಿದೆ ಎಂದರು.