ವಿಶ್ವಾಸಾರ್ಹತೆ. ಹೊಸತನ ಜಾಗತಿಕ ಗೌರವಕ್ಕೆ ಬುನಾದಿ: ಅಭಿನವ ಗವಿಸಿದ್ದೇಶ್ವರ ಶ್ರೀಗಳು

KannadaprabhaNewsNetwork |  
Published : Nov 02, 2026, 03:45 AM IST
ಫೋಟೋವಿವರ- (1ಎಚ್‌ಪಿಟಿ4) ಹೊಸಪೇಟೆ ನಗರದ ವಿಕಾಸ ಸೌಹಾರ್ದ ಕ್ಫೋಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿ ಕಟ್ಟಡದಲ್ಲಿ ಭಾನುವಾರ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾಗಿರುವ ಸ್ವಯಂಚಾಲಿತ ಆಟೊ ವಾಲ್ಟ್ ಲಾಕರ್ (ವಿಕಾಸ ಅಹರ್ನಿಶಿ) ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಲೋಕಾರ್ಪಣೆಗೊಳಿಸಿದರು | Kannada Prabha

ಸಾರಾಂಶ

ಇದು ಬ್ಯಾಂಕ್‌ನ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಲು ಸಹಾಯಕ. ಹೊಸ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿದಾಗ ಬ್ಯಾಂಕ್ ಗ್ರಾಹಕರಿಗೆ ಹತ್ತಿರವಾಗುತ್ತದೆ

ಹೊಸಪೇಟೆ: ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಹೊಸತನ ಇದ್ದರೆ ಜಗತ್ತಿನಲ್ಲಿ ಎಲ್ಲೆಡೆ ಗೌರವ ಸಿಗುತ್ತದೆ. ಅದೇ ರೀತಿ ಹೊರಗೆ ಸಂಪತ್ತು, ಒಳಗೆ ಸಂತೋಷ ಇದ್ದರಷ್ಟೇ ಮನುಷ್ಯ ವಿಕಾಸ ಹೊಂದಲು ಸಾಧ್ಯ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿ ಕಟ್ಟಡದಲ್ಲಿ ಭಾನುವಾರ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾಗಿರುವ ಸ್ವಯಂಚಾಲಿತ ಆಟೊ ವಾಲ್ಟ್ ಲಾಕರ್ (ವಿಕಾಸ ಅಹರ್ನಿಶಿ) ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಎಲ್ಲರನ್ನೂ ಕೂಡಿ ಕರೆದುಕೊಂಡು ಹೋಗುವುದೇ ವಿಕಾಸ. ಇಂತಹ ಧ್ಯೇಯ ಇಟ್ಟುಕೊಂಡು ಕಳೆದ 29 ವರ್ಷಗಳಿಂದ ಜನರಿಗೆ ಹೊಸತನಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಬ್ಯಾಂಕ್‌ ಇದೀಗ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಸ್ವಯಂಚಾಲಿತ ಲಾಕರ್ ವ್ಯವಸ್ಥೆ ಅಳವಡಿಸಿಕೊಂಡಿದೆ. ಇದು ಬ್ಯಾಂಕ್‌ನ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಲು ಸಹಾಯಕ. ಹೊಸ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿದಾಗ ಬ್ಯಾಂಕ್ ಗ್ರಾಹಕರಿಗೆ ಹತ್ತಿರವಾಗುತ್ತದೆ ಎಂದರು.

ಎರಡನೇ ಮಹಾಯುದ್ಧದಲ್ಲಿ ಬಹುತೇಕ ಸರ್ವನಾಶವಾದ ಜಪಾನ್‌ ಬಳಿಕ ಯುದ್ಧ ಉಪಕರಣ ತಯಾರಿಸಲಿಲ್ಲ, ಬದಲಿಗೆ ವಿಜ್ಞಾನ, ತಂತ್ರಜ್ಞಾನದಲ್ಲಿ ಗುಣಮಟ್ಟ ಕಾಯ್ದುಕೊಂಡು ದೊಡ್ಡದಾಗಿ ಬೆಳೆಯಿತು. ಅದರಿಂದ ಜಗತ್ತಿನಲ್ಲಿ ವಿಶ್ವಾಸಾರ್ಹ ದೇಶ ಎಂಬ ಹೆಗ್ಗಳಿಕೆ ಗಳಿಸಿಕೊಂಡಿತು. ನಾವು ಕಹಿ ಉಂಡರೂ ಸಮಾಜಕ್ಕೆ ಸಿಹಿ ನೀಡಬೇಕು ಎಂಬ ಪಾಠ ಜಪಾನ್‌ ನಮಗೆ ತೋರಿಸಿಕೊಟ್ಟಿದೆ ಎಂದರು.

ಲಾಕರ್‌ನಲ್ಲಿ ದುಡ್ಡಿಟ್ಟವರಷ್ಟೇ ಶ್ರೀಮಂತರಲ್ಲ, ಹೊರಗೆ ದುಡಿಯಲು ಕೈಕಾಲೂ ಗಟ್ಟಿ ಇರಬೇಕು. ಹೊರಗೆ ಸಂಪತ್ತು, ಒಳಗೆ ಸಂತೋಷ, ಇವೆರಡೂ ಇದ್ದರೆ ಒಬ್ಬ ವ್ಯಕ್ತಿ, ಒಂದು ದೇಶ, ಒಂದು ಸಂಸ್ಥೆ ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ಶ್ರೀಗಳು ಹೇಳಿದರು.

ಕೊಟ್ಟೂರುಸ್ವಾಮಿ ಮಠದ ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನಿಗೆ ಬದುಕೇ ಅಮೂಲ್ಯ. ಪ್ರತಿ ಕ್ಷಣವನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಮನುಷ್ಯ ಕ್ರಿಯಾಶೀಲನಾಗಿದ್ದಷ್ಟೂ ಸಮಯ ಏನಾದರೂ ಹೊಸದನ್ನು ಕೊಡುವುದು ಸಾಧ್ಯವಾಗುತ್ತದೆ, ವಿಕಾಸ ಬ್ಯಾಂಕ್‌ ಅಂತಹ ಗುಣ ತನ್ನಲ್ಲಿ ಮೈಗೂಡಿಸಿಕೊಂಡಿದೆ ಎಂದರು.

ಗೋದ್ರೆಜ್‌ ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಸಹಾಯಕ ಉಪಾಧ್ಯಕ್ಷ ಪರ್ಸಿ ಮಾಸ್ಟರ್ ಸಭೆಯಲ್ಲಿ ಮಾತನಾಡಿದರು.

ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಮಾತನಾಡಿ, ಹೊಸತನವೇ ಈ ಬ್ಯಾಂಕ್‌ನ ಹೆಗ್ಗುರುತು. ಕಳೆದ 25 ವರ್ಷಗಳಿಂದ ಕೇವಲ ಮೂರು ದಿನ ಬಿಟ್ಟರೆ ವರ್ಷದ 365 ದಿನವೂ ಗ್ರಾಹಕರಿಗೆ ಸೇವೆ ನೀಡುತ್ತ ಬಂದಿದೆ. ದಕ್ಷಿಣ ಭಾರತದಲ್ಲಿ ದೊಡ್ಡ ಬ್ಯಾಂಕ್‌ ಮಾಡದ ದೊಡ್ಡ ಸಾಹಸಕ್ಕೆ ಈ ಸ್ವಯಂಚಾಲಿತ ಲಾಕರ್ ಮೂಲಕ ವಿಕಾಸ ಬ್ಯಾಂಕ್ ಕೈಹಾಕಿದೆ. ಟೈರ್‌ 3 ನಗರಗಳಲ್ಲಿ ಬರುವ 1,450ಕ್ಕೂ ಹೆಚ್ಚು ಅರ್ಬನ್‌ ಬ್ಯಾಂಕ್‌ಗಳ ಪೈಕಿ ವಿಕಾಸ ಬ್ಯಾಂಕ್‌ನ ಸ್ಥಾನ 84ರ ಒಳಗೆ ಇದೆ. ಮುಂಬರುವ ದಿನಗಳಲ್ಲಿ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌ ಆಗಿ ಪರಿವರ್ತನೆಗೊಳ್ಳಲು ಅವಕಾಶ ಇದೆ ಎಂದರು.

ಬ್ಯಾಂಕ್ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಬಿ.ಜೆ ಕುಲಕರ್ಣಿ, ನಿರ್ದೇಶಕರುಗಳಾದ ಬೇಳೂರು ಸುದರ್ಶನ್, ಸುನಿಲ್ ಕುಮಾರ್, ನವ್ಯಶ್ರೀ ಹಿರೇಮಠ, ಶಂಕರ್ ಜಾಧವ್, ಗಂಗಾಧರ್ ಪತ್ತಾರ್, ಲಲಿತ್ ಪ್ರಸನ್ನ, ವಿಕಾಸ್ ಕೆ, ಜಗದೀಶ್ ಹಿರೇಮಠ್, ರಾಘವೇಂದ್ರ ಎಂ, ಶಿವಕುಮಾರ್ ಶೆಟ್ಗರ್ ಸೇರಿದಂತೆ ನಗರದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭೂಪಾಲ್ ಪ್ರಹ್ಲಾದ್ ಕುಟುಂಬ ಸೇರಿದಂತೆ ಲಾಕರ್ ಸೇವೆ ಪಡೆದ ಕೆಲವರಿಗೆ ಸಾಂಕೇತಿಕವಾಗಿ ಕೀಲಿ ಹಸ್ತಾಂತರಿಸಲಾಯಿತು. ಸುಜಾತಾ ಕರ್ಣಂ ಪ್ರಾರ್ಥಿಸಿದರು. ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಸ್ವಾಗತಿಸಿದರು. ನಿರ್ದೇಶಕ ಅನಂತ ಜೋಶಿ ವಂದಿಸಿದರು. ಮಧುಶ್ರೀ ನಿರೂಪಿಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್