ಶಿರಸಿ: ಧರ್ಮ ಎಂಬ ಶಬ್ದಕ್ಕೆ ಹಲವಾರು ವ್ಯಾಖ್ಯೆಗಳಿವೆ. ಉನ್ನತ ಸತ್ಯಗಳಿಗೆ ನಮಗೆ ಅನ್ವಯವಾಗುವ ರೀತಿಯಲ್ಲಿ ರೂಪಗಳನ್ನು ತೊಡಿಸಿ ಆ ಮೂಲಕ ನಾವು ಮೇಲಕ್ಕೆ ಹತ್ತುವುದೇ ಧರ್ಮ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ತಮ್ಮ ೩೪ನೇ ಚಾತುರ್ಮಾಸ್ಯ ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ ವ್ರತ ಸಂಕಲ್ಪದಲ್ಲಿ ಶಿವಳ್ಳಿ ಸೀಮಾ ಶಿಷ್ಯರಿಂದ ಗುರುಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.
ನಮ್ಮ ಸಾಮಾನ್ಯ ದೃಷ್ಟಿಗಳಿಗೆ ಗೋಚರಿಸದ ಉನ್ನತ ಸತ್ಯಗಳು ಜಗತ್ತಿನಲ್ಲಿ ಇವೆ. ಅಂತಹ ಸತ್ಯಗಳಿಗೆ ನೇರವಾಗಿ ನಮಗೆ ತಲುಪುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಅದಕ್ಕೆ ಒಂದು ರೂಪ, ಆಕಾರಗಳನ್ನು ತೊಡಿಸಿ ನಮಗೆ ಕಾಣಿಸುವಂತೆ ಮಾಡುವುದು ಮತ್ತು ಆ ಮೂಲಕ ಎತ್ತರಕ್ಕೆ ನಾವು ಹತ್ತಬೇಕು. ಈ ಒಂದು ಸಾಧನೆಯೇ ಧರ್ಮ. ಮೇಲಕ್ಕೆ ಹತ್ತುವುದಕ್ಕೋಸ್ಕರವೇ ಮನುಷ್ಯ ಜನ್ಮ ಬಂದಿದೆ. ಅಭ್ಯುದಯ ಅಂದರೆ ಏಳಿಗೆ. ನಿಶ್ರೇಯಸ್ಸು ಅಂದರೆ ಮೋಕ್ಷ. ಮನುಷ್ಯ ಜನ್ಮವನ್ನು ಉನ್ನತಿಗೆ ಏರುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಶಿಷ್ಯ ಭಕ್ತರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಾದುಕಾ ಪೂಜೆ, ಭಿಕ್ಷಾ ಸೇವೆ ಸಲ್ಲಿಸಿ, ಉಭಯ ಶ್ರೀಗಳವರ ಆಶೀರ್ವಾದವನ್ನು ಪಡೆದರು. ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರು ಗಣಪತಿ ಹೆಗಡೆ, ಮಂಜುನಾಥ ಹೆಗಡೆ, ನಾರಾಯಣ ಹೆಗಡೆ, ಪ್ರಸನ್ನ ಭಟ್ಟ ಇತರರು ಇದ್ದರು.ಮನುಷ್ಯನ ಉನ್ನತಿ: ಗುರಿ ನೆನಪಿಲ್ಲದಿದ್ದರೆ ದಾರಿಯೂ ನೆನಪಿನಲ್ಲಿ ಇರುವುದಿಲ್ಲ. ನಮ್ಮ ಮಾರ್ಗವನ್ನು ತಪ್ಪಿಸುತ್ತದೆ. ಆದರೆ ಗುರಿಯನ್ನು ಸರಿಯಾಗಿ ಇಟ್ಟುಕೊಂಡರೆ ಗುರಿ ನೆನಪಿದ್ದರೆ, ದಾರಿ ಸರಿಯಾಗಿ ಇರುತ್ತದೆ. ಆಗ ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯ. ಮನುಷ್ಯನ ಉನ್ನತಿಗೆ ಇರುವುದೇ ಧರ್ಮ ಎಂದು ಸ್ವರ್ಣವಲ್ಲೀ ಶ್ರೀ ತಿಳಿಸಿದರು.