ಕನ್ನಡಪ್ರಭ ವಾರ್ತೆ, ಶಿಕಾರಿಪುರ
ತಾಲೂಕಿನ ಕಡೇನಂದಿಹಳ್ಳಿಯಲ್ಲಿನ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಲೋಕಾರ್ಪಣೆ ಹಾಗೂ ಪುರಾಣ ಪ್ರವಚನದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜನವಸತಿ ಇಲ್ಲದ ಪ್ರದೇಶದಲ್ಲಿ ಮಠವೊಂದನ್ನು ಕಟ್ಟಿ ಅಭಿವೃದ್ಧಿಗೊಳಿಸಿರುವ ಪೀಠಾಧಿಪತಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆ ಗಳಿಸಿದೆ. ಇದಕ್ಕೆ ಕೈಗೂಡಿಸಿರುವ ಭಕ್ತರ ಸಹಕಾರವೂ ದೊಡ್ಡದು. ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮಂಗಲ ಮೂರ್ತಿ ಸುಂದರವಾಗಿ ನಿರ್ಮಾಣವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಶ್ರೀ ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಜನಮನದಲ್ಲಿ ಭಕ್ತಿಭಾವನೆ ಬೆಳೆಸುತ್ತಿರುವ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ಪರಿಸರ ನೋಡಿ ಅತೀವ ಸಂತಸವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ದಶಧರ್ಮ ಸೂತ್ರಗಳು ಎಲ್ಲರ ಬಾಳಿನಲ್ಲಿ ಬೆಳಕು ಮೂಡಿಸಿವೆ ಎಂದರು.
ತೊಗರ್ಸಿಯ ಮಹಾಂತದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಮುಖ್ಯ ಅತಿಥಿ ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್, ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣಕುಮಾರ್, ಹರಿಹರದ ಆರ್.ಟಿ. ಪ್ರಶಾಂತ ದುಗ್ಗತ್ತಿಮಠ ಆಗಮಿಸಿದ್ದರು. ಕಡೆನಂದಿಹಳ್ಳಿ ವೀರಭದ್ರ ಶಿವಾಚಾರ್ಯರು, ತೊಗರ್ಸಿಯ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿಯ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.
ಶಿಕಾರಿಪುರದ ನೂಪುರ ಭರತನಾಟ್ಯ ಕಲಾ ಕೇಂದ್ರದವರಿಂದ ಭರತ ನಾಟ್ಯ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಆರಂಭದಲ್ಲಿ ಶ್ರೀ ಶ್ರೀಶೈಲ ಹಾಗೂ ಕಾಶಿ ಜಗದ್ಗುರು ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ಬಿರುದಾವಳಿ ಗಳೊಂದಿಗೆ ಜರುಗಿತು. ಸಹಸ್ರಾರು ಭಕ್ತರು ದರ್ಶನಾಶೀರ್ವಾದ ಪಡೆದರು.
ಕಾರ್ಯಕ್ರಮಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು.