ಆಚರಣೆ ಕಟ್ಟುನಿಟ್ಟು ಪಾಲಿಸಿದರೆ ಧರ್ಮ ರಕ್ಷಣೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಸನಾತನ ಹಿಂದೂ ಧರ್ಮವನ್ನು ರಕ್ಷಣೆ ಮಾಡಲು ಹಿಂದೂ ಧರ್ಮದ ಜನತೆ ಗಟ್ಟಿಯಾಗಿ ಒಗ್ಗಟ್ಟಾಗಬೇಕಾಗಿದೆ ಎಂದು ಎಡೆಯೂರ ಕ್ಷೇತ್ರದ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನೆಗಳೂರು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಧರ್ಮ ಸಮಾರಂಭ, ಕಾರ್ತೀಕ ದೀಪೋತ್ಸವ

ಕನ್ನಡಪ್ರಭ ವಾರ್ತೆ ಗುತ್ತಲ

ಸನಾತನ ಹಿಂದೂ ಧರ್ಮವನ್ನು ರಕ್ಷಣೆ ಮಾಡಲು ಹಿಂದೂ ಧರ್ಮದ ಜನತೆ ಗಟ್ಟಿಯಾಗಿ ಒಗ್ಗಟ್ಟಾಗಬೇಕಾಗಿದೆ ಎಂದು ಎಡೆಯೂರ ಕ್ಷೇತ್ರದ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಸಮೀಪದ ನೆಗಳೂರ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ರಾತ್ರಿ ಧರ್ಮ ಸಮಾರಂಭ ಹಾಗೂ ಕಾರ್ತೀಕ ದೀಪೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಧರ್ಮವನ್ನು ಬೆಳೆಸುವಲ್ಲಿ ಎಲ್ಲ ಧರ್ಮಗಳು ಪ್ರಯತ್ನಿಸುತ್ತಿವೆ. ಧರ್ಮವನ್ನು ಕಾಯುವಲ್ಲಿ ಅನ್ಯ ಧರ್ಮೀಯರು ಮುಂಚೂಣಿಯಲ್ಲಿ ಇದ್ದಾರೆ ಎಂದು ಹೇಳಿದರು.

ಕಾರ್ತಿಕ ಮಾಸದಲ್ಲಿ ದೀಪವನ್ನು ಬೆಳಗಿಸುವ ಮೂಲಕ ಭಕ್ತರು ತಮ್ಮ ಕಷ್ಟಗಳನ್ನು ತೊಲಗಿಸುವಂತೆ ಮತ್ತು ಜೀವನದಲ್ಲಿ ಬೆಳಕನ್ನು ನೀಡುವಂತೆ ಗುರುವಿನಲ್ಲಿ ಪ್ರಾರ್ಥಿಸಬೇಕು. ಕತ್ತಲಿನಿಂದ ಬೆಳಕಿನಡೆಗೆ ಹೋಗುವ ಮಾಸವೇ ಕಾರ್ತೀಕ ಮಾಸ. ಕಾರ್ತೀಕ ಮಾಸವು ಸಾಮಾನ್ಯ ಜನರಿಗಿಂತ ಶಿವನಿಗೇ ಶ್ರೇಷ್ಠವಾದ ಮಾಸವಾಗಿದೆ ಎಂದು ಹೇಳಿದರು.

ಕನ್ನಡ ಭಾಷೆಯ ಮೂಲಪುರುಷ ವೀರಭದ್ರದೇವರು ಎಂದರೆ ತಪ್ಪಾಗಲಾರದು. ಪುರಾಣಗಳಲ್ಲಿ ಈ ಕುರಿತು ಉಲ್ಲೇಖಿತವಾಗಿದೆ ಎಂದರು.

ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹತ್ತು ಮಕ್ಕಳಿಗೆ ಜನ್ಮ ನೀಡುವ ಬದಲು ಹುಟ್ಟಿದ ಒಂದೇ ಮಗುವಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳು ತಂದೆ, ತಾಯಿ ಕಣ್ಣಲ್ಲಿ ಕಣ್ಣೀರು ತರಿಸದೆ, ಅದೇ ಕಣ್ಣಲ್ಲಿ ಆನಂದಬಾಷ್ಪ ಬರಿಸಬೇಕು ಎಂದರು.

ಕನ್ನಡದ ಕಂದ ಅನುಷಾ ಹಿರೇಮಠ ಮಾತನಾಡಿ, ಮಕ್ಕಳು ತಂದೆ-ತಾಯಿಯರನ್ನು ದೇವರೆಂದು ತಿಳಿದು ಪೂಜಿಸಬೇಕು. ಕನ್ನಡವನ್ನು ಸರಳವಾಗಿ ಮಾತನಾಡಲು ಬಂದರೆ ಆ ವ್ಯಕ್ತಿ ಜಗತ್ತಿನ ಯಾವ ಭಾಷೆಯನ್ನಾದರೂ ಕಲಿಯಲು ಸಾಧ್ಯ. ಆದರಿಂದ ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಮೊದಲು ಕನ್ನಡವನ್ನು ಚೆನ್ನಾಗಿ ಕಲಿಸಿ. ಕನ್ನಡ ಉಳಿಸಿ ಎಂದರೆ ಸಾಲದು, ಕನ್ನಡ ಭಾಷೆಯನ್ನು ಜೀವನದಲ್ಲಿ ನಾವು ಎಷ್ಟು ಉಪಯೋಗಿಸುತ್ತೇವೆಯೊ ಅಷ್ಟು ನಾವು ಕನ್ನಡವನ್ನು ಉಳಿಸಿದ ಹಾಗೇ ಎಂದಳು.

ಹೊಳಲು ಮಲ್ಲಿಕಾರ್ಜುನಸ್ವಾಮಿ ವಿರಕ್ತಮಠದ ಚನ್ನಬಸವ ದೇವರು ಮಾತನಾಡಿ, ಧರ್ಮದಿಂದ ಇದ್ದರೆ ಎಲ್ಲವನ್ನೂ ಸಾಧಿಸಬಹುದು, ಗುರುವಿನ ಬಳಿ ಇದ್ದರೆ ಸುಖ ಶಾಂತಿ ಸಿಗಲು ಸಾಧ್ಯವಾಗುತ್ತದೆ. ಅಧ್ಯಾತ್ಮದ ಕಡೆ ಜನ ಒಲವು ತೋರಿಸಿದಾಗ ಒಳ್ಳೆ ರೀತಿಯಿಂದ ಸಾಗಿಸಲು ಸಾಧ್ಯವಾಗುತ್ತದೆ ಎಂದರು.

ಮುಂಜಾನೆ ಉಭಯ ಶ್ರೀಗಳಾದ ಗುರುಶಾಂತೇಶ್ವರ ಸ್ವಾಮೀಜಿ ಹಾಗೂ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ಜರಗಿತು. ಸಂಜೆ 7ಕ್ಕೆ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಾರ್ತಿಕೋತ್ಸವದಲ್ಲಿ ಸಹಸ್ರಾರು ದೀಪಗಳನ್ನು ಬೆಳಗಿಸಿದರು. ರಂಗೋಲಿಯಿಂದ ಬಿಡಿಸಿದ ಭವ್ಯವಾದ ಈಶ್ವರನ ಚಿತ್ರ ವಿಶೇಷವಾಗಿದ್ದವು.

ಅದಿತಿ ಮರಿಯಾನಿ, ಸಮನ್ವಿತಾ ಕೂಡಲಮಠ ಭರತನಾಟ್ಯ ಪ್ರದರ್ಶಿಸಿದರು. ಚಂದ್ರಪ್ಪ ಮಾಹುರ, ಸಿದ್ಧಪ್ಪ ಬಾಲಣ್ಣನವರ ಹಾಗೂ ಜಾತ್ರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಗುತ್ತಲ, ಬೆಳವಿಗಿ, ಮಣ್ಣೂರ, ಹೊಸರಿತ್ತಿ, ಮೇವುಂಡಿ, ಮರೋಳ, ಹಾಲಗಿ, ಹೊಸಹೊನ್ನತ್ತಿ, ಹಾವೇರಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಗದಿಗಯ್ಯ ಹಿರೇಮಠ ಸ್ವಾಗತಿಸಿದರು. ಗುರುಶಾಂತ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

Share this article