ಧರ್ಮಕ್ಕೆ ಪ್ರಪಂಚವೇ ಆಧಾರ, ನಮ್ಮದು ಅಂದರೆ ಸನಾತನ ಹಿಂದೂ ಎನ್ನುವುದು ಮಾತ್ರ ಧರ್ಮ. ಉಳಿದವು ಮತಗಳು.
ಕನ್ನಡಪ್ರಭ ವಾರ್ತೆ ಕಾರವಾರ
ಧರ್ಮಕ್ಕೆ ಪ್ರಪಂಚವೇ ಆಧಾರ, ನಮ್ಮದು ಅಂದರೆ ಸನಾತನ ಹಿಂದೂ ಎನ್ನುವುದು ಮಾತ್ರ ಧರ್ಮ. ಉಳಿದವು ಮತಗಳು ಎಂದು ಶೃಂಗೇರಿಯ ವಿಧುಶೇಖರ ಭಾರತೀ ಶ್ರೀಗಳು ನುಡಿದರು.
ನಗರದ ಮಾಲಾದೇವಿ ಮೈದಾನದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಹಿಂದೂ ಧರ್ಮ ಶ್ರೇಷ್ಠವಾದದ್ದು. ಧರ್ಮದ ಆಚರಣೆಯಿಂದ ಶ್ರೇಯಸ್ಸು ಆಗಲಿದೆ. ಈ ಧರ್ಮ ಜಗತ್ತಿಗೆ ಆಧಾರವಾಗಿದೆ. ಎಲ್ಲರೂ ಬಯಸುವುದು ಸುಖ. ನಾಸ್ತಿಕ ಆಸ್ತಿಕ ಇಬ್ಬರೂ ಬಯಸುವುದು ಸುಖ. ಆದರೆ ಮಾರ್ಗ ಬೇರೆ ಬೇರೆ. ಲೌಕಿಕ ಕೆಲಸದಿಂದ ತಾತ್ಕಾಲಿಕ ಸುಖ ಸಿಗುತ್ತದೆ. ಅದರ ಹಿಂದೆಯೂ ಧರ್ಮ ಇದೆ. ಧರ್ಮ ಇಲ್ಲದಿದ್ದರೆ ಕಷ್ಟ ಪಟ್ಟರೂ ಫಲ ಸಿಗದು. ಧರ್ಮ ಕಣ್ಣಿಗೆ ಕಾಣದೆ ಪ್ರಪಂಚವನ್ನು ನಡೆಸುತ್ತಿದೆ.
ಸುಖವನ್ನು ಕೊಡುವುದು ಧರ್ಮ. ನಮ್ಮ ಧರ್ಮವು ಮಾತ್ರ ಧರ್ಮ. ಉಳಿದಿದ್ದೆಲ್ಲ ಮತಗಳು. ಈ ಜಗತ್ತಿಗೆ ಧರ್ಮ ಆಧಾರ. ಇದು ಸನಾತನ ಧರ್ಮ. ಅನಾದಿಕಾಲದಿಂದ ಬಂತು. ಇದು ವಾಸ್ತವಿಕ ವಿಚಾರ. ಆರಂಭ ಗೊತ್ತಿಲ್ಲ. ಒಬ್ಬ ವ್ಯಕ್ತಿಯ ಮತಿಯಿಂದ ಬಂದಿದ್ದು ಮತ. ಇಂದು ಬೇಕಾದರೆ ಮತ ಸೃಷ್ಟಿ ಮಾಡಬಹುದು.
ಯಾರೇ ಆಕ್ಷೇಪಿಸಿದರೂ ಧರ್ಮ ಬದಲಾಗದು. ಈ ಧರ್ಮಕ್ಕೆ ತೊಂದರೆಯಾದರೆ ಪ್ರಪಂಚಕ್ಕೆ ತೊಂದರೆ. ಸನಾತನ ಹಿಂದೂ ಎನ್ನುವುದು ಧರ್ಮ ಎಂದರು. ಮುಖ್ಯ ಉಪಸ್ಥಿತರಿದ್ದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ. ಉಮಾ, ಶಂಕರ ಭಗವತ್ಪಾದರು ನಮಗೆ ಪ್ರಾತ:ಸ್ಮರಣೀಯರು. ಸನಾತನದ ಧರ್ಮದ ಸ್ಥಾಪನೆಗಾಗಿ ದೇಶಾದ್ಯಂತ ಸಂಚರಿಸಿದರು. ಶಂಕರರು ಹಾಗೂ ಮಂಡನಮಿಶ್ರ ಅವರ ನಡುವೆ ವಾದಕ್ಕೆ ಉಭಯಭಾರತಿ ನ್ಯಾಯಾಧೀಶರಾಗಿದ್ದರು. ಅಂದರೆ ಎಂಟನೇ ಶತಮಾನದಲ್ಲಿ ಸ್ತ್ರೀಯರಿಗೆ ಪ್ರಾತಿನಿಧ್ಯ ಇತ್ತು. ನಮ್ಮ ಸಮಾಜ ಒಗ್ಗೂಡಬೇಕಾಗಿದೆ. ಮಹಾರಾಷ್ಟ್ರದ ಐಟಿ ಕಂಪನಿಯಲ್ಲಿ ನಡೆದ ದೌರ್ಜನ್ಯ ಕೇಳಿದಾಗ ರಕ್ತ ಕುದಿಯುತ್ತೆ. ಇದು ಬಹುಸಂಖ್ಯಾತರಾದ ನಮ್ಮ ದೌರ್ಬಲ್ಯ. ನಮ್ಮ ಸಂಸ್ಕೃತಿ ಬಗ್ಗೆ ಅರಿವು ನೀಡಬೇಕಾಗಿದೆ. ಸಮಾಜ ಒಂದಾಗಿ ಒಗ್ಗಟ್ಟಿನಿಂದ ಇರುವ ಸಂದರ್ಭ ಈಗ ಎದುರಾಗಿದೆ. ಸಂಸ್ಕೃತಿ ಉಳಿಯಲು ಮಾತೆಯರೇ ಕಾರಣ. ನಮ್ಮ ಮಕ್ಕಳನ್ನು ಸದೃಢವಾಗಿ ಬೆಳೆಸೋಣ ಎಂದರು.
ರಾಮಕೃಷ್ಣಾಶ್ರಮದ ಭವೇಶಾನಂದ ಶ್ರೀಗಳು, ಶಂಕರರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದರು.
ಗುರುವಂದನೆ ಕಾರ್ಯಕ್ರಮ ಸಂಘಟಿಸಿದ್ದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ಕುಟುಂಬದ ಜೊತೆ ಗುರುಕಾಣಿಕೆ ಅರ್ಪಿಸಿದರು. ನಾಟ್ಯಶಾರದೆ ಮೂರ್ತಿ, ಬೆಳ್ಳಿ ಅಭಿನಂದನಾ ಪತ್ರ ನೀಡಿದರು. ಶಿವಮೂರ್ತಿ ಜೋಯಿಸ್ ಅಭಿನಂದನಾಪತ್ರ ವಾಚಿಸಿದರು.
ರವಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಪುಷ್ಪ ಗುರುಕುಲ ವಿದ್ಯಾರ್ಥಿಗಳಿಂದ ವೇದಘೋಷ. ಪದ್ಮಜಾ ಜೋಯಿಸ್ ಸಂಗಡಿಗರಿಂದ ಗುರುನಾಮ ಸ್ಮರಣೆ ನಡೆಯಿತು.
ಪರ್ಬತ್ ದಂಪತಿ ದೂಳಿ ಪೂಜೆ ನೆರವೇರಿಸಿದರು. ಶ್ರೀಗಳನ್ನು ಪೂರ್ಣಕುಂಭ, ಡೊಳ್ಳಿನ ವಾದನದ ಮೂಲಕ ಬರಮಾಡಿಕೊಳ್ಳಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.