ಕನ್ನಡಪ್ರಭ ವಾರ್ತೆ ಕೊಪ್ಪ
ಸರ್ವ ಕಾಲಕ್ಕೂ, ಸರ್ವ ದೇಶಕ್ಕೂ, ಸರ್ವ ಜನರಿಗೂ ಸಮಾನವಾಗಿ ಅನ್ವಯವಾಗುವ ಜೀವನ ಮೌಲ್ಯವೇ ನಿಜವಾದ ಧರ್ಮ ಎಂದು ಹರಿಹರಪುರದ ಪೀಠಾಧೀಶ್ವರರಾದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.ಹರಿಹರಪುರ ದಿವ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ಮೂರನೇ ದಿನವಾದ ಭಾನುವಾರ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮತ, ಪಂಥ ಮತ್ತು ಧರ್ಮಕ್ಕೆ ವ್ಯತ್ಯಾಸಗಳಿವೆ. ಮತ ಎಂದರೆ ತಮ್ಮ ಪಂಗಡವನ್ನು ಹೊರತುಪಡಿಸಿ ಬೇರೆ ಯಾವ ಮತಗಳು ಅಸ್ತಿತ್ವದಲ್ಲಿಲ್ಲವೆಂದು ಹೇಳುವುದು. ಧರ್ಮ ಎಂದರೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವುದಾಗಿದೆ. ಧರ್ಮ ಮತ್ತು ಮತದ ಬಗ್ಗೆ ಇರುವ ವ್ಯತ್ಯಾಸವನ್ನು ಎಲ್ಲರೂ ಮನನ ಮಾಡಿಕೊಂಡು ಶುದ್ಧವಾದ ಜೀವನ ನಡೆಸಿ ಧರ್ಮದ ಹಾದಿಯಲ್ಲಿ ನಡೆಯಬೇಕು. ಎಲ್ಲರನ್ನೂ ಸಮಾನವಾಗಿ ಪ್ರೀತಿ ವಾತ್ಸಲ್ಯದಿಂದ ಅಂತಃಕರಣದಿಂದ ಅನ್ಯೋನ್ಯ ಪ್ರೀತಿಯಿಂದ ಸಹಯೋಗದೊಂದಿಗೆ ಜೀವನ ನಡೆಸಬೇಕು ಎಂಬುದಾಗಿ ತಿಳಿಸಿದರು.
ಶೃಂಗೇರಿ ಶಾಖೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಗುಣಾನಾಥ ಸ್ವಾಮೀಜಿಯವರು ಮಾತನಾಡಿ, ಹರಿಹರಪುರ ಶ್ರೀಗಳು ಮಹಾತ್ಮರು, ಇಂಥವರಿಂದಲೇ ಸಮಾಜದ ಉದ್ಧಾರ, ಆದಿ ಶಂಕರಾಚಾರ್ಯರ ಮಾರ್ಗದರ್ಶನದಂತೆ ಶ್ರೀಗಳು ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ತಮಗೆ ಯಾವುದೇ ವ್ಯಾಮೋಹವು ಇಲ್ಲದಂತೆ ವಿರಕ್ತರಾಗಿ ಮೋಕ್ಷದ ಸಾಧನೆ ಮಾಡುತ್ತಿದ್ದಾರೆ ಎಂದರು.ಶ್ರೀ ವಿದ್ಯಾಭಿನವಾ ಸುಬ್ರಮಣ್ಯ ಭಾರತಿ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹರಿಹರಪುರ ಶಂಕರಾಚಾರ್ಯರ ಸಂಕಲ್ಪದಂತೆ ಈ ಸಮಾಜವು ಬೇದ ಭಾವವಿಲ್ಲದೆ ಒಗ್ಗಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಬೆಂಗಳೂರಿನ ವೇದ ವಿಜ್ಞಾನ ಶೋಧನಾ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ರಾಮಚಂದ್ರ ಭಟ್, ಬೆಂಗಳೂರಿನ ಶಾಹಿ ಎಕ್ಸ್‌ಪೋರ್ಟ್‌ನ ಸಿಸಿಓ ಶ್ರೀನಿವಾಸ್ ರಾವ್, ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧಕಶ್ರೀ ಪ್ರಶಸ್ತಿ ಸ್ವೀಕರಿಸಿದರು.ಶ್ರೀಮಠದ ಆಡಳಿತಾಧಿಕಾರಿ ಡಾ. ಬಿ.ಎಸ್. ರವಿಶಂಕರ್ ಪ್ರಾಸ್ತಾವಿಕ ಮಾತನಾಡಿದರು. ತಮಿಳುನಾಡು, ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಪ್ಪ ತಾಲೂಕಿನ ಸುತ್ತಮುತ್ತಲಿನಿಂದ ಆಗಮಿಸಿದ ಸಹಸ್ರಾರು ಭಕ್ತಾಧಿಗಳು ಧಾರ್ಮಿಕ ಕಾರ್ಯಕ್ರಮ ಹಾಗೂ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು.