ಧಾರವಾಡ:
ಯುವಕರಿಗೆ ಉದ್ಯೋಗ ಕೊಡುತ್ತೇವೆ, ರೈತರಿಗಾಗಿ ಯೋಜನೆಗಳನ್ನು ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಈ ಆಶ್ವಾಸನೆ ಈಡೇರಿಸಿದೆಯೇ? ಹತ್ತು ವರ್ಷದ ಆಡಳಿತದಲ್ಲಿ ದೇಶದ ಜನ ಏನೂ ಕಾಣಲಿಲ್ಲ. ಬರೀ ಮೋದಿ ಹವಾ ನೋಡುವಂತಾಗಿದೆ. 70 ವರ್ಷ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದ್ದೆ ಬಂತು. ತಾವು ಹತ್ತು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದು ಏತಕ್ಕೆ ಹೇಳುತ್ತಿಲ್ಲ ಎಂದರು.
ಕಾಂಗ್ರೆಸ್ ವಿಧಾನಸಭಾ ಚುನಾವಣೆಗೂ ಮೊದಲು ಘೋಷಣೆ ಮಾಡಿದ್ದಂತೆ ಐದು ಗ್ಯಾರಂಟಿಗಳನ್ನು ಕೇವಲ ಹತ್ತು ತಿಂಗಳಲ್ಲಿ ಜಾರಿ ಮಾಡಿದೆ. ಈ ಗ್ಯಾರಂಟಿಗಳು ಒಂದು ಧರ್ಮ, ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲ ಜಾತಿ, ಧರ್ಮದವರಿಗೂ ಸಮಾನವಾಗಿ ಸಿಕ್ಕಿವೆ. ಇದು ಕಾಂಗ್ರೆಸ್ ಸಾಧನೆ. ಇದನ್ನೆಲ್ಲಾ ದೇಶದ, ಧಾರವಾಡ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು. ಇನ್ನಾದರೂ ಧಾರವಾಡ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಲಿ ಎಂದು ಅಸೂಟಿ ಮನವಿ ಮಾಡಿದರು.ಗುರುವಾರ ಅಸೂಟಿ ಅವರು ಹುಬ್ಬಳ್ಳಿ ಸಮೀಪದ ತಡಸ, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೇಲೂರಿನಲ್ಲಿ ಪ್ರಚಾರ ನಡೆಸಿದರು. ಬೇಲೂರ ಗ್ರಾಮದ ವಿಠ್ಠಲ್ ಹಾಗೂ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ವೇಳೆ ಶಿವಲೀಲಾ ಕುಲಕರ್ಣಿ, ಈಶ್ವರ ಶಿವಳ್ಳಿ, ಬಸಪ್ಪ ಸಂಡೂರ ಇದ್ದರು. ನಂತರ ಸಮೀಪದ ಕೋಟೂರ, ಶಿಂಗನಹಳ್ಳಿ ಗ್ರಾಮದಲ್ಲಿ ಅಸೂಟಿ ಪ್ರಚಾರ ಸಭೆ ನಡೆಯಿತು. ಕೋಟೂರ ಗ್ರಾಮದ ಉಡಚಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.ಸುಳ್ಳು ಹೇಳುವ ನಾಯಕರನ್ನು ಮತ್ತು ಸುಳ್ಳನ್ನೇ ಉಸಿರಾಗಿಸಿಕೊಂಡಿರುವ ರಾಜಕಾರಣಿಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ವಿನೋದ ಅಸೂಟಿ ಹೇಳಿದರು.