ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಆಶ್ರಯದಲ್ಲಿ ನಡೆದ ನೂತನ ಗಣಪತಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ನೇತೃತ್ವವನ್ನು ನೊಣವಿನಕೇರಿಯ ಕಾಡಸಿದ್ದೇಶ್ವರ ಮಠದ ಕರಿವೃಷಭ ಮಹಾಸ್ವಾಮಿಗಳು ವಹಿಸಿಕೊಂಡು, ಯಶಸ್ವಿಯಾಗಿ ನೆರವೇರಿಸಿದರು.
ಆನಂತರ ನಡೆದ ಧರ್ಮಸಭೆಯಲ್ಲಿ ನೊಣವಿನಕೇರಿ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮಿಗಳು ಮಾತನಾಡಿ, ಧರ್ಮ ಕಾರ್ಯಗಳಿಗೆ ಭಕ್ತರು ಸಹಾಯ ಸಹಕಾರ ಬೆಂಬಲ ಅಗತ್ಯವಾಗಿದೆ. ನೂತನ ಗಣಪತಿಯ ಸುಂದರ ದೇವಸ್ಥಾನವನ್ನು ಪಟ್ಟಣದ ಎಪಿಎಂಸಿ ವರ್ತಕರ ಸಂಘ ನೆರವೇರಿಸಿದ್ದು ಸ್ಮರಣೀಯ. ಧರ್ಮ ಹಾಗೂ ದೇವತಾ ಕಾರ್ಯಗಳಿಗೆ ಸಮಾಜದ ಪ್ರತಿಯೊಬ್ಬರೂ ಸ್ಪಂದಿಸಬೇಕು. ಮಠ-ಮಾನ್ಯಗಳು ಧರ್ಮ ಬೋಧನೆಯನ್ನು ತಮ್ಮ ಉಸಿರಾಗಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಎಪಿಎಂಸಿಯು ಹೆಚ್ಚು ಪ್ರಸಿದ್ಧಿ ಪಡೆದಿದೆ. ಕೋವಿಡ್ ಸಮಯದಲ್ಲಿ ಲಕ್ಷ್ಮೇಶ್ವರ ಎಪಿಎಂಸಿ ವರ್ತಕರ ಸಂಘವು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಕಾರ್ಯ ಮಾಡಿದೆ ಎಂದು ಹೇಳಿದರು. ಸಭೆಯಲ್ಲಿ ಮುಕ್ತಿ ಮಂದಿರದ ವಿಮಲ ರೇಣುಕ ವೀರ ಮುಕ್ತಿ ಮುನಿ ಸ್ವಾಮಿಗಳು ಮಾತನಾಡಿದರು. ಪಟ್ಟಣದ ಎಪಿಎಂಸಿ ಅಧ್ಯಕ್ಷ ಓಂ ಪ್ರಕಾಶ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಪಿಎಂಸಿ ಬೆಳೆದು ಬಂದ ದಾರಿ ಹಾಗೂ ಸಂಘದ ಕಾರ್ಯ ವೈಖರಿ ಹಾಗೂ ನೂತನ ಗಣಪತಿ ದೇವಸ್ಥಾನದ ನಿರ್ಮಾಣ ಕುರಿತು ಮಾತನಾಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ಮಾತನಾಡಿದರು.ಧರ್ಮಸಭೆಯಲ್ಲಿ ಗಂಜಿಗಟ್ಟಿಯ ವೈಜನಾಥ ಮಹಾಸ್ವಾಮಿಗಳು, ಹೂವಿನ ಶಿಗ್ಲಿಯ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಮಹಾಸ್ವಾಮಿಗಳು, ಪಟ್ಟಣದ ಕರೇವಾಡಿ ಮಠದ ಮಳೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಓಂ ಪ್ರಕಾಶ ಜೈನ್ ಇದ್ದರು.
ನೂತನ ಗಣಪತಿ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ದುಡಿದ ಶಿಲ್ಪಿಗಳು ಹಾಗೂ ಸಹಾಯಕರನ್ನು ಸನ್ಮಾನಿಸಲಾಯಿತು.