ಹೊಸಕೋಟೆ: ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮುದಾಯ ಸಂಯುಕ್ತ ಒಕ್ಕೂಟದ ಸಹಯೋಗದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಸಂತಸ ವಿಚಾರ ಎಂದು ಬಾಳೆಹೊನ್ನೂರು ಜಗದ್ಗುರು ರಂಭಾಪುರಿ ಪೀಠದ ಶ್ರೀ ೧೦೦೮ ಜಗದ್ಗುರು ಡಾ.ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಷ್ಟಲಿಂಗ ಪೂಜೆಗೆ ಸಾಕಷ್ಟು ಮಹತ್ವವಿದ್ದು ಶ್ರದ್ಧಾಭಕ್ತಿಯಿಂದ ನಿಯಮಾನುಸಾರ ಮಾಡಬೇಕು. ಇಷ್ಟಲಿಂಗ ಧಾರಣೆಯಿಂದ ಮನುಷ್ಯ ಶಿವಸ್ವರೂಪ ಆಗಲಿದ್ದು ಏಕಾಗ್ರತೆ ಪೂಜೆಯಿಂದ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಮನುಷ್ಯ ಇಷ್ಟಲಿಂಗವನ್ನು ಪೂಜೆ ಮಾಡುತ್ತಾ ಪ್ರಾಣಲಿಂಗವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂದರು.
ನಾಗಲಾಪುರ ವೀರಸಿಂಹಾಸನ ವ್ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹೊಸಕೋಟೆ ನಗರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಶ್ರೀ ರಂಭಾಪುರು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಇಷ್ಟಲಿಂಗ ಪೂಜೆ ಹಾಗೂ ಧರ್ಮಜಾಗೃತಿ ಕಾರ್ಯಕ್ರಮವನ್ನು ಹೊಸಕೋಟೆಯ ಕುಲಬಾಂದವರು ಒಗ್ಗಟ್ಟಾಗಿ ಆಚರಣೆ ಮಾಡಿ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು.ಬಾಳೆ ಹೊನ್ನೂರು ಖಾಸ ಮಠ ಎಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ಸಮುದಾಯದಲ್ಲಿ ಇಷ್ಟಲಿಂಗ ಪೂಜೆಗೆ ಮೊದಲ ಆದ್ಯತೆ ನೀಡಬೇಕು, ಅದು ಶ್ರೀಮಂತರೇ ಆಗಲಿ ಅಥವ ಬಡವರೇ ಆಗಲಿ ನಿತ್ಯ ಇಷ್ಟಲಿಂಗ ಪ್ರಜೆ ಮಾಡಿ ದೇವರ ಅನುಗ್ರಹ ಪಡೆಯಬೇಕು ಎಂದರು.
ಬೆಳ್ಳಾವಿ ಮಹಾಸಂಸ್ಥಾನ ಮಠದ ಶ್ರೀ ಮಹಾಂತ ಶಿವಾಚಾರ್ಯಸ್ವಾಮಿಜಿ ಮಾತನಾಡಿ ರಂಭಾಪುರು ಶ್ರೀಗಳು ಪ್ರತಿ ವರ್ಷ ದಾವಣಗೆರೆಯಲ್ಲಿ ಆಷಾಡ ಮಾಸದಲ್ಲಿ ಒಂದು ತಿಂಗಳ ಕಾಲ ಇಷ್ಟಲಿಂಗ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತಿದ್ದರು ಆದರೆ ಇನ್ನು ಮುಂದೆ ಪ್ರತಿ ಆಶಾಡ ಮಾಸದಲ್ಲಿ ಇಡಿ ರಾಜ್ಯ ಸಂಚರಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಇಷ್ಟಲಿಂಗ ಪೂಜೆ ಮಾದಲು ಶ್ರೀ ಗಳು ನಿರ್ದರಿಸಿದ್ದಾರೆ ಎಂದರು.ಈ ಕಾರ್ಯಕ್ರಮದಲ್ಲಿ ವಿವಿಧ ಮಠಾದೀಶರು, ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಸಂಘಟನೆಗಳು ಮುಖಂಡರು ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.
ಫೋಟೋ: 30 ಹೆಚ್‌ಎಸ್‌ಕೆ 4 ಮತ್ತು 54: ಹೊಸಕೋಟೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಯುಕ್ತ ಒಕ್ಕೂಟದ ಸಹಯೋಗದಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.