ಧಾರ್ಮಿಕ ಅಂಧ ಶ್ರದ್ಧೆ, ಇತರೆ ಧರ್ಮ ದ್ವೇಷಿಸುವುದು ಅಪಾಯಕಾರಿ: ಡಾ. ಸಿದ್ದನಗೌಡ ಪಾಟೀಲ

KannadaprabhaNewsNetwork |  
Published : Mar 11, 2025, 12:47 AM IST
10ಡಿಡಬ್ಲೂಡಿ6ಶ್ರೀ ಸಂತ ಶಿಶುನಾಳ ಶರೀಫ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್, ಬಸವಶಾಂತಿ ಮಿಷನ್ ಮತ್ತು ಅನುರಾಗ ಸಾಂಸ್ಕೃತಿಕ ಬಳಗ ಹಮ್ಮಿಕೊಂಡ ಸಂತ ಶಿಶುನಾಳ ಶರೀಫ 206ನೇ ಜಯಂತಿ ಮತ್ತು ಗುರು ಗೋವಿಂದ ಭಟ್ಟರ ಸ್ಮರಣಾರ್ಥ ಭಾವೈಕ್ಯ ಸಮ್ಮೇಳನ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಧರ್ಮ ಜನರನ್ನು ಒಳಗೊಳ್ಳುವಂತಿರಬೇಕು. ಅದು ಜನರನ್ನು ಬಹಿಷ್ಕೃತಗೊಳಿಸಬಾರದು ಎಂದು ಚಿಂತಕ ಡಾ. ಸಿದ್ದನಗೌಡ ಪಾಟೀಲ ಹೇಳಿದರು.

ಧಾರವಾಡ: ಧಾರ್ಮಿಕ ಅಂಧ ಶ್ರದ್ಧೆ ಮತ್ತು ತನ್ನ ಧರ್ಮವೇ ಶ್ರೇಷ್ಠ ಎಂದು ಪರಿಭಾವಿಸಿ ಇತರೆ ಧರ್ಮಗಳನ್ನು ದ್ವೇಷಿಸುವುದು ಅಪಾಯಕಾರಿ. ಇದನ್ನು ಯಾರೇ ಧರ್ಮ ಅನುಸರಿಸಿದರೂ ಅದು ಖಂಡನೀಯ ಎಂದು ಚಿಂತಕ ಡಾ. ಸಿದ್ದನಗೌಡ ಪಾಟೀಲ ಹೇಳಿದರು.

ಶ್ರೀ ಸಂತ ಶಿಶುನಾಳ ಶರೀಫ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್, ಬಸವಶಾಂತಿ ಮಿಷನ್ ಮತ್ತು ಅನುರಾಗ ಸಾಂಸ್ಕೃತಿಕ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಸಂತ ಶಿಶುನಾಳ ಶರೀಫ 206ನೇ ಜಯಂತಿ ಮತ್ತು ಗುರು ಗೋವಿಂದ ಭಟ್ಟರ ಸ್ಮರಣಾರ್ಥ ಭಾವೈಕ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಧರ್ಮ ಜನರನ್ನು ಒಳಗೊಳ್ಳುವಂತಿರಬೇಕು. ಅದು ಜನರನ್ನು ಬಹಿಷ್ಕೃತಗೊಳಿಸಬಾರದು. ಧರ್ಮ ಸರ್ವರನ್ನು ಒಳಗೊಳ್ಳುವಂತಾದಾಗ ಮಾತ್ರ ಜನರ ಬದುಕು ಸಹ್ಯವಾಗುತ್ತದೆ. ಪರಧರ್ಮ ಸಹಿಷ್ಣುತೆ ಮತ್ತು ಕೋಮು ಸಾಮರಸ್ಯ ನಮ್ಮ ಪರಂಪರೆಯಲ್ಲಿಯೇ ಹುದುಗಿಕೊಂಡಿವೆ‌ ಎಂದರು.

ಗುರು ಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫರು ಈ ಪರಂಪರೆಯ ವಾರಸುದಾರರು. ಶಿಶುನಾಳ ಶರೀಫರು ತಮ್ಮ ಕಾವ್ಯದ ಮೂಲಕ ಸಮಾಜದಲ್ಲಿ ಬೇರುಬಿಟ್ಟ ಜಾತೀಯತೆ, ಕೋಮುವಾದ ಮತ್ತು ಎಲ್ಲ ಬಗೆಯ ಬೇಧ-ಭಾವಗಳ ಕಳೆಯನ್ನು ಕಿತ್ತು ಹಾಕಿ ಸೌಹಾರ್ದ ಬೆಳೆಯನ್ನು ಹುಲುಸಾಗಿ ಬೆಳೆದು ಸಮಾಜಕ್ಕೆ ಮಾದರಿಯಾದವರು. ಅವರ ತತ್ವ ಸಿದ್ಧಾಂತ ನಮಗಿಂದು ದಾರಿದೀಪವಾಗಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿದ ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಗುರು ಗೋವಿಂದ ಭಟ್ಟರು ಮತ್ತು ಶಿಶುನಾಳ ಶರೀಫರ ಸೌಹಾರ್ದಮಯ ಸಂಬಂಧದ ಬಗ್ಗೆ ಡಾ. ದ.ರಾ. ಬೇಂದ್ರೆಯವರು ಬರೆದ ಲೇಖನ ಉಲ್ಲೇಖಿಸಿದರು. ಕನ್ನಡ ನಾಡಿನ ಬಹುತ್ವ ಮತ್ತು ಬಹುಶೃತ ಕೋಮು ಸೌಹಾರ್ದತಾ ಪರಂಪರೆಗೆ ಗುರು ಶಿಷ್ಯರಿರ್ವರೂ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಭಾವೈಕ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 30 ಸಾಧಕರಿಗೆ ಭಾವೈಕ್ಯತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂತ ಶಿಶುನಾಳ ಶರೀಫರ ತತ್ವ ಪದಗಳ ಸಂಗೀತೋತ್ಸವವನ್ನು ಅನುರಾಗ ಸಾಂಸ್ಕೃತಿಕ ಬಳಗ ನಡೆಸಿಕೊಟ್ಟಿತು. ಸಂಗೀತೋತ್ಸವದಲ್ಲಿ ಡಾ. ಸದಾಶಿವ ಮರ್ಜಿ, ದೀಪ ದೇಶಪಾಂಡೆ, ಫಕೀರಪ್ಪ ಮುರಕಟ್ಟಿ, ಸೊಹೈಲ್ ಸೈಯದ್, ಹೇಮಂತ್ ಲಮಾಣಿ, ಸೋನು ಬಾಯಿ, ವೈವಿಧ್ಯಮಯ ತತ್ವಪದ ಪ್ರಸ್ತುತ ಪಡಿಸಿದರು. ತಬಲಾ ಸಾಥ್ ಡಾ. ಅನಿಲ್ ಮೇತ್ರಿ ಹಾಗೂ ಹಾರ್ಮೋನಿಯಂ ಹೇಮಂತ್ ಲಮಾಣಿ ನಿರ್ವಹಿಸಿದರು. ಬಸವ ಶಾಂತಿ ಮಿಷನ್ ಮಹಾದೇವ ಹೊರಟ್ಟಿ, ಶಂಕರ ಹಲಗತ್ತಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''