ಇಂದಿನಿಂದ ಜಗದಂಬೆಯ ದೇಗುಲದಲ್ಲಿ ಧಾರ್ಮಿಕ ಸಂಭ್ರಮ

KannadaprabhaNewsNetwork |  
Published : Apr 19, 2026, 02:15 AM IST
ಕಳಸಾರೋಹಣಕ್ಕೆ ಸಿದ್ಧವಾಗಿರುವ ಹಗರಿಬೊಮ್ಮನಹಳ್ಳಿಯ ಭವ್ಯ ಜಗದಂಬಾ ದೇಗುಲ | Kannada Prabha

ಸಾರಾಂಶ

ಕಳಸ, ಗಣೇಶ ಮತ್ತು ದತ್ತಾತ್ರೇಯ ಮೂರ್ತಿಗಳ ಭವ್ಯ ಶೋಭಾಯಾತ್ರೆಯೊಂದಿಗೆ ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

ಬಿ.ಲಕ್ಷ್ಮೀಕಾಂತಸಾ

ಹಗರಿಬೊಮ್ಮನಹಳ್ಳಿ: ಪಟ್ಟಣದ ಬಹುತೇಕ ಸಮುದಾಯಗಳ ಶ್ರದ್ಧಾ ಭಕ್ತಿಯ ಕೇಂದ್ರವಾದ ಜಗದಂಬಾ ದೇವಸ್ಥಾನದಲ್ಲಿ ಇದೇ ಏ. 19ರಿಂದ 22ರ ವರೆಗೆ ದೇಗುಲದ ಕಳಸಾರೋಹಣ ಸೇರಿದಂತೆ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಪಟ್ಟೇಗಾರರು) ಸಮಾಜದ ವಟುಗಳ ಉಪನಯನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಭಾನುವಾರ ಸಂಜೆ ಪಟ್ಟಣದ ರಾಮನಗರದ ಈಶ್ವರ ದೇವಸ್ಥಾನದಿಂದ ಜಗದಂಬಾ ದೇಗುಲದ ವರೆಗೂ ನಡೆಯುವ ಕಳಸ, ಗಣೇಶ ಮತ್ತು ದತ್ತಾತ್ರೇಯ ಮೂರ್ತಿಗಳ ಭವ್ಯ ಶೋಭಾಯಾತ್ರೆಯೊಂದಿಗೆ ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

ಸಮಾಜದ ಹಿನ್ನೆಲೆ:

1953ರಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣವಾದಾಗ ತೀರಾ ಸಂಪದ್ಭರಿತವಾಗಿದ್ದ ತೋಟಗಳ 72 ಹಳ್ಳಿಗಳು ಮುಳುಗಿ ಹೋದವು. ಹಾಗೆ ಮುಳುಗಿ ಹೋದ ಹಳ್ಳಿಗಳಲ್ಲಿ ಕಾತರಕಿ ಎಂಬ ಹಳ್ಳಿಯೂ ಒಂದು. ಕಾತರಕಿಯಲ್ಲಿ ನೇಕಾರಿಕೆಯನ್ನೇ ಕುಲ ಕಸುಬು ಮಾಡಿಕೊಂಡಿದ್ದ ಕ್ಷತ್ರಿಯ ಜನಾಂಗದವರೇ ಹೆಚ್ಚಾಗಿದ್ದರು.

ಜಲಾಶಯ ನಿರ್ಮಾಣದ ಪರಿಣಾಮ ನಿರಾಶ್ರಿತರಾದ ಪಟ್ಟೇಗಾರರಿಗೆ ಕೊಪ್ಪಳ ಬಳಿ ಹೊಸ ಗ್ರಾಮವನ್ನು ನಿರ್ಮಾಣ ಮಾಡಿದ ಸರ್ ಎಂ. ವಿಶ್ವೇಶ್ವರಯ್ಯ ಅವರು ಗ್ರಾಮಕ್ಕೆ ಭಾಗ್ಯನಗರ ಎಂದು ನಾಮಕರಣ ಮಾಡಿದರು. ಆದರೆ, ಕೆಲವು ಕುಟುಂಬಗಳು ಭಾಗ್ಯನಗರದಲ್ಲಿ ನೆಲೆಸಲು ಇಚ್ಛಿಸದೇ ಹಲವು ಕುಟುಂಬಗಳು ದೂರದ ಮುಂಬೈಗೆ ವಲಸೆ ಹೋದರೆ ಹತ್ತಕ್ಕೂ ಹೆಚ್ಚು ಕುಟುಂಬಗಳು ಹಗರಿಬೊಮ್ಮನಹಳ್ಳಿಯಲ್ಲಿ ನೆಲೆ ಕಂಡುಕೊಂಡವು.

ಹಾಗೆ ಪಟ್ಟಣದಲ್ಲಿ ನೆಲೆ ಕಂಡುಕೊಂಡ ಪಟ್ಟೇಗಾರರ 10 ಕುಟುಂಬಗಳು ನೇಕಾರಿಕೆ ವೃತ್ತಿಯಲ್ಲಿ ತೊಡಗಿಕೊಳ್ಳದೇ ಜೀವನೋಪಾಯಕ್ಕೆ ಹೋಟೆಲ್ ಮತ್ತು ಸೋಡಾ ಅಂಗಡಿಗಳ ನಿರ್ವಹಣೆ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಸಾಮಾನ್ಯ ಬದುಕು ಕಟ್ಟಿಕೊಳ್ಳುತ್ತಾ ಸಾಗಿದರು.

80ರ ದಶಕದ ಕೊನೆಯಲ್ಲಿ ಪಟ್ಟಣವು ಅವಿಭಜಿತ ಬಳ್ಳಾರಿ ಜಿಲ್ಲೆಯ ಬಹುಮುಖ್ಯ ವ್ಯಾಪಾರ ಕೇಂದ್ರವಾಗುತ್ತಿದ್ದಂತೆಯೇ ರಾಜ್ಯದ ಹಲವು ಜಿಲ್ಲೆಗಳಿಂದ ಪಟ್ಟೇಗಾರ ಸಮುದಾಯದ 40ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿಗೆ ವಲಸೆ ಬಂದು ಮಾಂಸಾಹಾರಿ ಖಾನಾವಳಿ ತೆರೆದು ಭರ್ಜರಿ ಆದಾಯದ ಮೂಲ ಕಂಡುಕೊಂಡರು. ಈ ಸಂದರ್ಭದಲ್ಲಿ ತಮ್ಮ ಕುಲದೇವತೆ ಜಗದಂಬಾದೇವಿಯ ದೇಗುಲ ನಿರ್ಮಿಸುವತ್ತ ಚಿತ್ತ ಹರಿಸಿದರು.

1990ರಲ್ಲಿ ಸಮಾಜದ ವಾಸುದೇವಸಾ ಭಾವಿಕಟ್ಟಿ ಅಧ್ಯಕ್ಷತೆಯಲ್ಲಿ ಸಂಘಟಿತರಾದ ಪಟ್ಟೇಗಾರರು ಸರ್ಕಾರದ ಪೂರಕ ಅನುದಾನ ಲಭಿಸದಿದ್ದರೂ ತಮ್ಮದೇ ಸಮುದಾಯದ ಸಹಭಾಗಿತ್ವದಲ್ಲಿ 2010ರಲ್ಲಿ ಸುಂದರವಾದ, ಭವ್ಯ ಜಗದಂಬಾ ಮಂದಿರ ನಿರ್ಮಿಸಿದರು. 1953ರಲ್ಲಿ ಮುಳುಗಡೆಯಾದ ಕಾತರಕಿಯಲ್ಲಿದ್ದ ಶ್ರೀದೇವಿಯ ಮೂರ್ತಿಯನ್ನು ಒಯ್ದು ಭಾಗ್ಯನಗರದಲ್ಲಿ ಪ್ರತಿಷ್ಠಾಪಿಸಿರುವ ತದ್ರೂಪಿ ಮೂರ್ತಿಯನ್ನೇ (ಇಟಗಿಯ ಶಿಲ್ಪಿ ಸುಶೀಲಾಂದ್ರಾಚಾರಿ ಕೆತ್ತನೆಗೈದ ಮೂರ್ತಿ) ಪಟ್ಟಣದ ದೇಗುಲದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿರುವುದು ವಿಶೇಷ.

ದೇಗುಲ ನಿಮಾರ್ಣದ ಸುದೀರ್ಘ 20 ವರ್ಷಗಳ ಅವಧಿಯಲ್ಲಿ ಮುಖಂಡರಾದ ರಂಗನಾಥಸಾ ಕಠಾರೆ, ಹರಿಹರದ ತಪೋವನದ ಶಶಿಕುಮಾರ್ ಮೆಹರವಾಡೆ, ನಾರಾಯಣಸಾ ದಲಬಂಜನ್ ಸೇರಿದಂತೆ ಬಹುತೇಕ ಮುಖಂಡರ ಶ್ರಮ ಉಲ್ಲೇಖನೀಯ. ದೇಗುಲದ ನಿರ್ಮಾಣದಲ್ಲಿ ಸಂಡೂರಿನ ಮಹಾರಾಜರಾದ ಕಾರ್ತಿಕ್ ಘೋರ್ಪಡೆ ಪಟ್ಟೇಗಾರರ ಸಮಾಜಕ್ಕೆ ಬಹುದೊಡ್ಡ ಆಸರೆಯಾದರು.

ದೇಗುಲ ನಿರ್ಮಿಸಿ ನಂತರ ಕಳೆದ 15 ವರ್ಷದಿಂದ ನಿರಂತರವಾಗಿ ಗಣೇಶೋತ್ಸವ, ಸಹಸ್ರಾರ್ಜುನ ಜಯಂತಿ ಮತ್ತು ದಸರಾ ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸುವ ಮೂಲಕ ದೇಗುಲವನ್ನು ಪಟ್ಟಣದ ಬಹುತೇಕ ಸಮುದಾಯಗಳ ಪಾಲಿಗೆ ಬಹು ದೊಡ್ಡ ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರವನ್ನಾಗಿಸಿದ್ದಾರೆ.

ದೇಗುಲ ನಿರ್ಮಾಣವಾದರೂ ದೇಗುಲದ ಗೋಪುರ ಮತ್ತು ಕಳಸಾರೋಹಣಕ್ಕೆ ನಿರಂತರವಾಗಿ ಅಡ್ಡಿ-ಆತಂಕಗಳು ಎದುರಾದರೂ ಹಾಲಿ ಅಧ್ಯಕ್ಷ, ಪುರಸಭೆ ಸದಸ್ಯ ದೀಪಕ್ ಕಠಾರೆ ತುಂಬ ಶ್ರಮ ವಹಿಸಿ ದೇಗುಲಕ್ಕೆ ಭವ್ಯ ಗೋಪುರ ನಿರ್ಮಿಸಿ ಕಳಸಾರೋಹಣಕ್ಕೆ ಮುಂದಾಗಿದ್ದಾರೆ. ಇವರಿಗೆ ಸಮಾಜದ ಮಹಿಳಾ ಮಂಡಳಿ ಮತ್ತು ಯುವ ಘಟಕ ನೆರವಾಗಿದೆ.

ಹಿಮಾಚಲ ಪ್ರದೇಶದ ಪ್ರಕಾಶ ಸ್ವರೂಪ ಸ್ವಾಮೀಜಿ, ಚಿತ್ತಾಪುರದ ಬಾಲಯೋಗಿನಿ ಜಯಶ್ರೀ ಮಾತಾಜಿ, ಕನ್ನೂರಿನ ಶಾಂತಿ ಕುಟೀರದ ತಾರಾಚಂದ್ರ ಮಹಾರಾಜರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುತ್ತಾರೆ.

ನಮ್ಮ ಸಮಾಜ 50 ಕುಟುಂಬಗಳ ಚಿಕ್ಕ ಸಮುದಾಯವಾದರೂ ಪ್ರತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮುದಾಯದ ಸಹಭಾಗಿತ್ವ ಇತರ ಸಮಾಜದ ಪ್ರಶಂಸೆಗೆ ಪಾತ್ರವಾಗುತ್ತದೆ. ಯುವಕರ ಶ್ರದ್ಧಾ-ಭಕ್ತಿ ಮತ್ತು ಸಂಪೂರ್ಣ ತೊಡಗಿಕೊಳ್ಳುವ ಮಹಿಳೆಯರಿಂದ ತಾಲೂಕಿನ ಉತ್ತಮ ಸಮಾಜವಾಗುವತ್ತ ದಾಪುಗಾಲಿಟ್ಟಿದೆ ಎನ್ನುತ್ತಾರೆ ಹಗರಿಬೊಮ್ಮನಹಳ್ಳಿ ಎಸ್ಎಸ್‌ಕೆ ಸಮಾಜದ ಅಧ್ಯಕ್ಷ ದೀಪಕ್ ಕಠಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಂಡ್ ಪವರ್ ಕಾಟಕ್ಕೆ ಬೇಸತ್ತು ಹೈಟೆನ್ಷನ್ ಕಂಬ ಏರಿದ ರೈತ
ತುಂಗಭದ್ರಾ ಒಡಲು ಬಗೆದು, ಮರಳು ದಂಧೆ