ಶಿರಸಿ: ಧರ್ಮಾಚರಣೆಗಳು ನಮ್ಮ ಒಳಗೆ ಸಹಜವಾಗಿ ಇರುವ ಶಕ್ತಿ ಉಳಿಸುತ್ತವೆ; ಬೆಳೆಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಉಭಯ ಶ್ರೀಗಳ ಪಾದುಕಾ ಪೂಜೆ, ಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು. ಪೂಜೆಯಲ್ಲಿ ಶ್ರದ್ಧೆಯಿಂದ ತೊಡಗಿದ್ದರಿಂದ ನಮ್ಮ ಶರೀರದಲ್ಲಿ ಅನೇಕ ಬದಲಾವಣೆ ಆಗುತ್ತವೆ. ಪೂಜೆಯಲ್ಲಿ ಶ್ರದ್ಧೆಯಿಂದ, ಏಕಾಗ್ರತೆಯಿಂದ ಕುಳಿತುಕೊಳ್ಳಬೇಕು. ಬೇರೆ ಏನೋ ವಿಚಾರ ಮಾಡುತ್ತಾ ಕುಳಿತರೆ ಎಷ್ಟೋ ಸಲ ನಮ್ಮೊಳಗೆ ಆದ ಬದಲಾವಣೆಗಳು ಗೊತ್ತಾಗುವುದಿಲ್ಲ. ನಾವು ಉಳಿದೆಲ್ಲ ಕೆಲಸ ಮಾಡಬೇಕಾದರೆ ೪೨ಕ್ಕೂ ಹೆಚ್ಚು ನಾಡಿಗಳು ಕೆಲಸ ಮಾಡುತ್ತವೆ. ಆದರೆ ಪೂಜೆಯಲ್ಲಿ ತೊಡಗಿದಾಗ ನಮ್ಮ ಶರೀರದ ೯ ನಾಡಿಗಳು ಮಾತ್ರ ಕೆಲಸ ಮಾಡುತ್ತವೆ. ಇದರ ಅರ್ಥ ಏನಂದರೆ ಮನಸ್ಸು ಇಂದ್ರಿಯಗಳಿಗೆ ಪೂಜೆಯಲ್ಲಿ ತೊಡಗಿದಾಗ ಉಳಿದ ನಾಡಿಗಳಿಗೆ ಒಂದು ಸಹಜವಾದ ವಿಶ್ರಾಂತಿಯಾಗುತ್ತದೆ. ವಿಶ್ರಾತಿಯಿಂದ ಆಗಬೇಕಾದ ಪ್ರಯೋಜನ ಪೂಜೆಯಲ್ಲಿ ಸಿಗುತ್ತದೆ. ನಾಡಿಗಳ ಶ್ರಮ ಕಡಿಮೆಯಾಗುತ್ತದೆ ಎಂದರು.
ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.ಮಹನೀಯರು ಗಾಯತ್ರಿ ಜಪಾನುಷ್ಠಾನ, ಮಾತೆಯರು ಶಂಕರಸ್ತೋತ್ರ ಪಠಣ, ಲಲಿತಾ ಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿದರು. ಗುರುಪಾದ ಹೆಗಡೆ, ಗಣಪತಿ ಹೆಗಡೆ ಹೊಸಬಾಳೆ, ಗೋಪಾಲಕೃಷ್ಣ ಹೆಗಡೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ೯೫ಕ್ಕೂ ಹೆಚ್ಚು ಪ್ರತಿಶತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀಗಳು ನೀಡಿದರು.