ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದಲ್ಲಿ ಗುರುವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಜನರು ಏಕಾಂಗಿ ಜೀವನ ಶೈಲಿ ನಡೆಸುತ್ತಿದ್ದಾರೆ. ಶ್ರೀ ಮಠಗಳು ಹಮ್ಮಿಕೊಳ್ಳುತ್ತಿರುವ ಸತ್ಸಂಗ ಸಮಾರಂಭಗಳು ಜನರ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಜಗತ್ತಿನಾದ್ಯಂತ ಧಾರ್ಮಿಕ ಪರಂಪರೆ, ಐತಿಹಾಸಿಕ ಸಂಸ್ಕೃತಿ ಹಿನ್ನೆಲೆಗಳಿರುವುದು ಭಾರತ ಮತ್ತು ಚೀನಾ ದೇಶಗಳಲ್ಲಿ ಮಾತ್ರ. ಇಂತಹ ಪ್ರಾಚೀನ ಪರಂಪರೆಯ ಭಾರತ ದೇಶದಲ್ಲಿ ಇಂದು ಯುವ ಸಮೂಹ ಯಾಂತ್ರಿಕ ಜೀವನ ಶೈಲಿಯನ್ನು ರೂಢಿಸಿಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.ಇಂದಿನ ಕಾಲಘಟ್ಟದಲ್ಲಿ ಭಾವನಾತ್ಮಕ ಮೌಲ್ಯಗಳು, ಪರಂಪರೆ ಉಳಿಸುವ ನಿಟ್ಟಿನಲ್ಲಿ ಧಾರ್ಮಿಕ ಸತ್ಸಂಗ ಕಾರ್ಯಗಳನ್ನು ನಡೆಸುವ ಮೂಲಕ ಹಲವು ಮಠಗಳು ಸಮಾಜಮುಖಿ ಕೆಲಸ ಮಾಡುತ್ತಿವೆ. ಸುತ್ತೂರು ಶ್ರೀಮಠವು ಎಲ್ಲಾ ಧರ್ಮಗಳನ್ನು ಒಂದೂಗೂಡಿಸಿ ಭಾವೈಕ್ಯತೆಯನ್ನು ಸಾರುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಧರ್ಮ, ಸಮಾಜಕ್ಕೆ ಸೇರಿದ ಸಮೂಹ ಶ್ರೀಮಠವನ್ನು ಗೌರವಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಜಮಾತ್ ಎ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಅಕ್ಬರ್ ಅಲಿ ಸಾಮಾಜಿಕ ಭಾವೈಕ್ಯತೆ ಎಂಬ ವಿಷಯವಾಗಿ ಮಾತನಾಡಿ, ತನ್ನ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಎಲ್ಲಾ ಜಾತಿ, ಧರ್ಮಗಳ ಜೊತೆಗೂಡಿ ಸಾಮರಸ್ಯದಿಂದ ನಾಡಿನಲ್ಲಿ ಬಾಳುವುದೇ ಭಾವೈಕ್ಯತೆಯ ಸಂಕೇತವಾಗಿದೆ ಎಂದರು.
ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.
ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಮಾರೇಹಳ್ಳಿ ಆದರ್ಶ ಶಾಲೆ, ಭೂವಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ರೂಪಕ ನಡೆಸಿಕೊಟ್ಟರು.