ಹೋಳಿ ಆಚರಣೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಿರಲಿ: ಡಾ. ಸುರೇಶ ಇಟ್ನಾಳ

KannadaprabhaNewsNetwork |  
Published : Feb 28, 2026, 02:30 AM IST
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿಸಭೆ ನಡೆಯಿತು. | Kannada Prabha

ಸಾರಾಂಶ

ಮಾ. 2, 3, 4ರಂದು ಜಿಲ್ಲೆಯಾದ್ಯಂತ ಆಚರಿಸುವ ಹೋಳಿ ಹಬ್ಬದಲ್ಲಿ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಕೊಪ್ಪಳ: ಮಾ. 2, 3, 4ರಂದು ಜಿಲ್ಲೆಯಾದ್ಯಂತ ಆಚರಿಸುವ ಹೋಳಿ ಹಬ್ಬದಲ್ಲಿ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಶುಕ್ರವಾರ ಜಿಲ್ಲೆಯಲ್ಲಿ ಮಾರ್ಚ್ 2, 3, 4ರಂದು ಆಚರಿಸುವ ಹೋಳಿ ಹಬ್ಬದ ಕುರಿತಾಗಿ ವಿವಿಧ ಧರ್ಮಗಳ ಮುಖಂಡರು, ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬಗಳು ಸಂಭ್ರಮವನ್ನು ಹೆಚ್ಚಿಸುವ ಹಾಗೂ ಹಂಚುವ ಉದ್ದೇಶವನ್ನು ಹೊಂದಿದ್ದು, ನಮ್ಮ ಆಚರಣೆಯಿಂದ ಇನ್ನೊಬ್ಬರಿಗೆ ತೊಂದರೆ, ನೋವುಂಟಾಗಬಾರದು. ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲಿ ಮಾರ್ಚ್ 2, 3 ಹಾಗೂ 4ರಂದು ಹೋಳಿ ಆಚರಣೆ ಮಾಡಲಾಗುತ್ತದೆ. ಈ ಸಂದರ್ಭ ಮಹಿಳೆಯರು ಹಾಗೂ ಮಕ್ಕಳ ಮೇಲೆ ಒತ್ತಾಯಪೂರ್ವಕ ಬಣ್ಣ ಎರಚಬಾರದು. ಹಾನಿಕಾರಕ ರಾಸಾಯನಿಕವುಳ್ಳ ಬಣ್ಣಗಳ ಬಳಕೆ ಮಾಡಬಾರದು. ಅಲ್ಲದೇ ಫೆ. 28ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಅಂತರದಲ್ಲಿ ಯಾವುದೇ ಗಲಾಟೆ, ಹೋಳಿ ಆಚರಣೆ ಮಾಡಬಾರದು. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು. ಬೇರೆ ಊರುಗಳಿಂದ ಬರುವ ಬಸ್‌ಗಳನ್ನು ತಡೆದು ಒತ್ತಾಯಪೂರ್ವಕ ಬಣ್ಣ ಎರಚಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಭಾವನೆ ಬಿತ್ತುವ ಯಾವುದೇ ಪೋಸ್ಟ್ ಮಾಡಬಾರದು. ಜಿಲ್ಲೆಯಾದ್ಯಂತ ಆಯಾ ಪ್ರದೇಶಕ್ಕನುಗುಣವಾಗಿ ಮಾ. 2, 3 ಮತ್ತು 4ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದಾಗ್ಯೂ ಅಬಕಾರಿ ಇಲಾಖೆಯವರು ನಿರಂತರ ನಿಗಾ ವಹಿಸಿ ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಂತಿಯುತ ಹಬ್ಬ ಆಚರಣೆಗೆ ಎಲ್ಲ ಸಾರ್ವಜನಿಕರು, ಧರ್ಮದವರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಹೋಳಿ ಹಬ್ಬದ ನೆಪದಲ್ಲಿ ಸಾರ್ವಜನಿಕರಿಗೆ, ಮಹಿಳೆಯರಿಗೆ ತೊಂದರೆ ಉಂಟಾಗಬಾರದು, ಮಸೀದಿಗಳಿಗೆ ಬಣ್ಣ ಎರಚಬಾರದು. ಹೋಳಿ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಟಿ.ಬಿ. ಡ್ಯಾಂ, ಸಾಣಾಪುರ ಕೆರೆಯ ಸುತ್ತ ಹೆಚ್ಚಿನ ನಿಗಾ ಇಡಲಾಗಿದೆ. ಯುವಕರ ಮಧ್ಯೆ ಗಲಾಟೆಗಳಾದಾಗ ಅಥವಾ ಏನೇ ತೊಂದರೆ ಉಂಟಾದಾಗ ಸಾರ್ವಜನಿಕರು 112, ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಬೇಕು. ಕುಡಿದು ವಾಹನ ಚಾಲನೆ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಅಬಕಾರಿ ಡಿವೈಎಸ್‌ಪಿ ಆಂಜನೇಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಷ್ಟಪಟ್ಟು ದುಡಿದರೂ ರೈತರಿಗೆ ತಪ್ಪದ ಸಂಕಷ್ಟ: ಯು. ಬಸವರಾಜ
ಅಘನಾಶಿನಿ ವೇದಾವತಿ ಜೋಡಣೆ ವಿರುದ್ಧ ನಿರಂತರ ಹೋರಾಟ