ನೆಮ್ಮದಿಯ ಬದುಕಿಗೆ ಧರ್ಮ ಬೋಧನೆಗಳು ಅವಶ್ಯ: ಸಂಕನೂರ

KannadaprabhaNewsNetwork | Published : Jul 2, 2025 11:48 PM
ಕಾರ್ಯಕ್ರಮದಲ್ಲಿ ವಿಪ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿದರು. | Kannada Prabha

ಗದಗ ನಗರದ ಗಾಣಿಗ ಭವನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ, ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ 10 ದಿನಗಳ ಮಾಲಿಕೆ ಉದ್ಘಾಟಿಸಲಾಯಿತು.

ಗದಗ: ನೆಮ್ಮದಿಯ ಬದುಕಿಗೆ, ಮಾನವ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಬೋಧನೆಗಳು ಅವಶ್ಯ ಎಂದು ವಿಪ ಸದಸ್ಯ ಪ್ರೊ.ಎಸ್.ವಿ. ಸಂಕನೂರ ಹೇಳಿದರು.ನಗರದ ಗಾಣಿಗ ಭವನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ, ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ 10 ದಿನಗಳ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಹಣ ಅಧಿಕಾರದ ಹಿಂದೆ ಬಿದ್ದು ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದು ಮಾನವ ಮಾನವನಾಗಿ ಬದುಕಬೇಕು. ಅದಕ್ಕಾಗಿ ವೀರಶೈವ ಧರ್ಮವನ್ನು ಬೋಧಿಸುವ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸುವ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಪ್ರವಚನವನ್ನು ನಾವಿಂದು ಆಲಿಸಬೇಕಿದೆ. ದಾರ್ಶನಿಕರು, ಧರ್ಮಗುರುಗಳು ಮಾನವ ಕಲ್ಯಾಣಕ್ಕಾಗಿ ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ನಡೆಸಬೇಕಿದೆ. ಅದಕ್ಕಾಗಿ ಶ್ರೀಗಳ ಈ ಪ್ರವಚನ ಮಾಲಿಕೆ ನಮಗೆಲ್ಲ ದಾರಿದೀಪ ಎಂದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗದುಗಿನಲ್ಲಿ ಶ್ರೀಮತ್ ಕಾಶೀ ಪೀಠದ ಹಿರಿಯ ಜಗದ್ಗುರುಗಳು ಪ್ರತಿ ವರ್ಷ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಬಹು ವರ್ಷಗಳಿಂದ ನಡೆಸಿದ ಪರಿಣಾಮವಾಗಿ ಗದಗ ಪರಿಸರದಲ್ಲಿ ಧರ್ಮಜಾಗೃತಿ, ಆಧ್ಯಾತ್ಮಿಕ ಚಿಂತನೆಗಳು ಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಿವೆ. ಈ ಪ್ರವಚನದೊಂದಿಗೆ ಭಗವದ್ಗೀತೆಯ ಪ್ರವಚನವೂ ನಡೆಯಬೇಕು ಎಂದರು.ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಂಗಮವಾಡಿಮಠ ವಾರಾಣಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ವೀರಶೈವ ಲಿಂಗಾಯತ ಧರ್ಮಕ್ಕೆ ಧರ್ಮ ಗ್ರಂಥವಾಗಿರುವ ಸಿದ್ಧಾಂತ ಶಿಖಾಮಣಿ ಸಾಧಕರನ್ನು ಸಾಧನೆಯ ಮಾರ್ಗಕ್ಕೆ, ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸುವಂತಹದ್ದು ಎಂದರು.ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಗಣ್ಯರಾದ ಶರಣಬಸಪ್ಪ ಗುಡಿಮನಿ, ಬಸವರಾಜ ಬಿಂಗಿ, ಶ್ರೀಕಾಂತ ಲಕ್ಕುಂಡಿ, ರಾಜು ಕುರಡಗಿ, ಮುರುಗೇಶ ಬಡ್ನಿ, ವೀರಣ್ಣ ಕರಬಿಷ್ಠಿ, ಫಕ್ಕೀರಪ್ಪ ಹೆಬಸೂರ, ಶಿವಾನಂದಯ್ಯ ಹಿರೇಮಠ, ಸಿ.ಕೆ.ಮಾಳಶೆಟ್ಟಿ, ಶಂಕರ ಹಾನಗಲ್ಲ, ಜಿ.ಎಸ್. ಗಡ್ಡದೇವರಮಠ, ಗುರಣ್ಣ ಬಳಗಾನೂರ, ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ, ಕಾಂಚನಮಾಲಾ ಬಾಳಿಹಳ್ಳಿಮಠ, ಶಿವಯೋಗಿ ತೆಗ್ಗಿನಮಠ, ಸಿ.ಜಿ. ಜಿನಗಾ, ಈಶ್ವರಪ್ಪ ಮುನವಳ್ಳಿ, ಬಸವರಾಜ ಹೆರಕಲ್, ಜಾಹ್ನವಿ ದೇಸಾಯಿ ಅವರನ್ನು ಶ್ರೀಗಳು ಸನ್ಮಾನಿಸಿದರು.ಡಾ. ಶಿವಬಸಯ್ಯ ಗಡ್ಡದಮಠ ಅವರಿಂದ ಪ್ರಾರ್ಥನೆ- ಸಂಗೀತ ಜರುಗಿತು. ಮಂಜುನಾಥ ಬೇಲೇರಿ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಕೆ. ಗುರುಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.