ಗುರುಗಳ ಸೇವೆ ಸ್ಮರಿಸುವುದು ಸಾರ್ಥಕ ಕಾರ್ಯ

KannadaprabhaNewsNetwork |  
Published : Aug 10, 2025, 01:30 AM IST
ಫೋಟೋ:೦೯ಕೆಪಿಸೊರಬ-೦೧ : ಸೊರಬದ ಗುರುಭವನದಲ್ಲಿ ಶ್ರೀ ರಂಗನಾಥ ಶಾಲೆ ಹಳೆಯ ವಿದ್ಯಾರ್ಥಿ ಬಳಗದಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ ಎಂದು ಪುರಸಭೆ ಉಪಾಧ್ಯಕ್ಷೆ ಶ್ರೀರಂಜಿನಿ ಪ್ರವೀಣ್‌ಕುಮಾರ್ ದೊಡ್ಮನೆ ಹೇಳಿದರು.

ಸೊರಬ: ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ ಎಂದು ಪುರಸಭೆ ಉಪಾಧ್ಯಕ್ಷೆ ಶ್ರೀರಂಜಿನಿ ಪ್ರವೀಣ್‌ಕುಮಾರ್ ದೊಡ್ಮನೆ ಹೇಳಿದರು.

ಶನಿವಾರ ಪಟ್ಟಣದ ಗುರುಭವನದಲ್ಲಿ ಶ್ರೀ ರಂಗನಾಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಬಳಗದಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಿಕ್ಷಕರಿಗೆ ಹಮ್ಮಿಕೊಂಡ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಜೀವನಕ್ಕೆ ಮಾರ್ಗದರ್ಶಕರಾಗಿರುತ್ತಾರೆ. ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಪಡದೇ, ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಗವದ್ಗೀತೆಯನ್ನು ಓದುವುದರಿಂದ ಮಾನವೀಯತೆ ಗುಣ ಬೆಳೆಯುತ್ತದೆ ಎಂದ ಅವರು, ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗಬೇಕಾದರೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮಾತ್ರವಲ್ಲ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಬಸವರಾಜ ಬಿ.ಮೂಡೇರ್ ಮಾತನಾಡಿ, ನಮ್ಮಿಂದ ಪಾಠ ಕೇಳಿದ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ಶಾಲೆಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಒಂದೆಡೆ ಸೇರಿ ನಮ್ಮನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸಿರುವುದು ನಮ್ಮ ಬದುಕಿನ ಸುವರ್ಣ ಕ್ಷಣ ಎಂದರೆ ತಪ್ಪಾಗಲಾರದು. ವಿದ್ಯಾಭ್ಯಾಸ ಮುಗಿದ ನಂತರವೂ ಗುರುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ಇದು ಮಾದರಿ ಕಾರ್ಯ ಎಂದರು.

ಹಳೇ ವಿದ್ಯಾರ್ಥಿ ಬಳಗದ ಸುನೀಲ್ ಮಾತನಾಡಿ, ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳು ತಮಗಿಂತಲು ಉನ್ನತ ಸ್ಥಾನಕ್ಕೇರಲಿ ಎಂದು ಬಯಸುತ್ತಾರೆ. ಪ್ರಾಥಮಿಕ ಶಿಕ್ಷಣ ಎಂಬುದು ಅಡಿಪಾಯವಿದ್ದಂತೆ. ವಿದ್ಯಾರ್ಥಿಗಳನ್ನು ಸಮಾಜದ ಸತ್ಪ್ರಜೆಗಳನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು ಒಂದಾಗಿ ಗುರುವಂದನೆ ಸಲ್ಲಿಸುತ್ತಿದ್ದೇವೆ ಎಂದರು.

ಇದೇ ವೇಳೆ ನಿವೃತ್ತ ಶಿಕ್ಷಕರಾದ ಬಸವರಾಜ ಬಿ.ಮೂಡೇರ್, ಸಿ.ಪಿ.ಈಶ್ವರಪ್ಪ, ಬಸವರಾಜ ಎಚ್.ಮಡ್ಲೂರ್, ಮಲ್ಲಿಕಾರ್ಜುನ ಜೋಗಿಹಳ್ಳಿ ಅವರನ್ನು ಸನ್ಮಾನಿಸಿ, ಗುರುವಂದನೆ ಸಲ್ಲಿಸಲಾಯಿತು.

ನಿವೃತ್ತ ಮುಖ್ಯಶಿಕ್ಷಕ ವೀರಭದ್ರಪ್ಪ ಸಿ.ಮಠದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ನೀಲಪ್ಪ ಬೂತಣ್ಣನವರ್ ಅಧ್ಯಕ್ಷತೆ ವಹಿಸಿದ್ದರು.

ಪಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಪುರಸಭೆ ನಾಮ ನಿರ್ದೇಶನ ಸದಸ್ಯ ಪರಶುರಾಮ ಸಣ್ಣಬೈಲ್, ಮುಖ್ಯಶಿಕ್ಷಕ ಬಿ.ಮಲ್ಲಿಕಾರ್ಜುನಪ್ಪ, ಹಳೇ ವಿದ್ಯಾರ್ಥಿ ಬಳಗದ ಜಿ.ಗಣೇಶ್, ಎಚ್.ಸಂತೋಷ್, ದಿಲೀಪ್, ನವೀನ್, ಸುನೀಲ್, ಎಂ.ಸಂತೋಷ್, ಅರುಣ್, ಇಮ್ರಾನ್, ರಾಜೇಶ್, ಪ್ರವೀಣ್ ದೊಡ್ಮನೆ, ಸೌಮ್ಯ, ರಶ್ಮಿ, ಗಣೇಶ್, ರವಿ, ಶರತ್‌ಚಂದ್ರ, ನಂದ, ಕಿರಣ್, ದಿವ್ಯ, ಆಶಾ, ಮುನಿಯಮ್ಮ, ಶಿವಕುಮಾರ್, ರಾಘವೇಂದ್ರ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಸಂತೋಷ್ ಸ್ವಾಗತಗೀತೆ ಹಾಡಿದರು. ಮಾಲತೇಶಪ್ಪ ಮಾಸ್ತರ್ ಸ್ವಾಗತಿಸಿದರು. ಅರುಣ್ ನಾಡಿಗ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ