ಕಂಪ್ಲಿ: ಪಟ್ಟಣದ ಗುರುಮಠದಲ್ಲಿ ಕಸಾಪ ತಾಲೂಕು ಘಟಕ ಹಮ್ಮಿಕೊಂಡ ಲೇಖಕ ಬಂಗಿ ದೊಡ್ಡ ಮಂಜುನಾಥ ರಚಿಸಿದ ವಾರಾಹಿ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಸತ್ಯ ಅರುಣೋದಯ ಸೇವಾ ಸಮಿತಿ ಅಧ್ಯಕ್ಷ ಡಿ.ವಿ. ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾಗತೀಕರಣದ ಭರಾಟೆಯಲ್ಲಿ ಇಂಗ್ಲೀಷ್ ಭಾಷೆಯನ್ನು ಓಲೈಸಿಕೊಂಡು ಕನ್ನಡ ಮರೆಯಬಾರದು. ಮಕ್ಕಳಿಗೆ ಇಂಗ್ಲೀಷ್ ಜೊತೆಗೆ ಕನ್ನಡ ಭಾಷೆಯ ಓದು, ಬರಹವನ್ನು ಕಲಿಸಬೇಕು. ಉನ್ನತ ಶಿಕ್ಷಣಗಳಿಸಿದವರು ಸಹ ದೋಷಪೂರಿತ ಕನ್ನಡ ಭಾಷೆಯ ಓದು, ಬರಹ ಬಳಸುತ್ತಿರುವುದು ವಿಷಾಧನೀಯ ಎಂದರು.ಕಲಬುರಗಿಯ ಡಾ.ಅಂಬೇಡ್ಕರ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಜೋಳದ ಕೂಡ್ಲಿಗಿ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಚುಟುಕಾಗಿ ತಕ್ಷಣ ಪ್ರತಿಕ್ರಿಯಿಸುವ ಕ್ರಿಯೆಯಿಂದಾಗಿ ದೀರ್ಘ ಬರಹ, ಓದಿನ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಕಾದಂಬರಿ ಕ್ಷೇತ್ರ ಸೊರಗುತ್ತಿದೆ. ಸಾಹಿತ್ಯದಲ್ಲಿ ಕಾದಂಬರಿ ಮೂರನೇ ಸ್ಥಾನದಲ್ಲಿದ್ದು ಕಾದಂಬರಿ ರಚನೆಗೆ ದೀರ್ಘ ಧ್ಯಾನ, ಆಲೋಚನೆಯ ಅಗತ್ಯವಿದೆ ಎಂದರು.
ಕಾದಂಬರಿ ಕ್ಷೇತ್ರ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದ್ದು ಸಂಶೋಧನೆಯ ಲಕ್ಷಣ ಹೊಂದಿದೆ. ಬಂಗಿ ದೊಡ್ಡ ಮಂಜುನಾಥರ ವಾರಾಹಿ ಕಾದಂಬರಿಯು ಮಹಿಳಾ ಕೇಂದ್ರೀತವಾಗಿದ್ದು ಮಹಿಳೆಯ ಧ್ವನಿ ಪ್ರತಿನಿಧಿಸಿದೆ. ಹೆಣ್ಣಿನ ಪ್ರಾಮುಖ್ಯತೆಯನ್ನು ಕಾದಂಬರಿಯಲ್ಲಿ ಮಿಳಿತವಾಗಿದೆ. ವ್ಯಕ್ತಿವಾದ ಆಧುನಿಕತೆಯ ಆಶಯವಾಗಿದ್ದರಿಂದ ಸಂಘಟನೆಗಳ ಒಡಕಿಗೆ ಕಾರಣವಾಗಿದೆ ಎಂದರು.ಕೊಪ್ಪಳದ ಸಾಹಿತಿ ಅಕ್ಬರ್ ಸಿ.ಕಾಲಿಮಿರ್ಚಿ ವಾರಾಹಿ ಕಾದಂಬರಿ ವಿಮರ್ಶಿಸಿ ಮಾತನಾಡಿ, ವಾರಾಹಿ ಕಾದಂಬರಿಯು ಓದಿಸಿಕೊಂಡು ಹೋಗುವ ಜಾಡು ಹೊಂದಿದ್ದರಿಂದ ಬೇಸರ ತರಿಸುವುದಿಲ್ಲ. ಕಾದಂಬರಿಯ ಎಲ್ಲ ಪಾತ್ರಗಳು ಓದುಗರನ್ನು ಬೆರಗುಗೊಳಿಸುತ್ತವೆ. ಕಾದಂಬರಿಯ ವಸ್ತು, ವಿಷಯ ವಿಭಿನ್ನ ಶೈಲಿ ಹೊಂದಿದ್ದು ಕಂಪ್ಲಿ ಭಾಗದ ಭಾಷಾ ಸೊಗಡನ್ನು ಹೊಂದಿದೆ. ಲೇಖಕರ ಕೃತಿ ಕೊಂಡು ಓದುವ ಸಂಸ್ಕೃತಿ ಬೆಳೆಯಬೇಕಿದೆ ಎಂದರು.
ಹೊಸಪೇಟೆಯ ಗಣಿ ಮಾಲೀಕ ಗೊಗ್ಗ ಚನ್ನಬಸವರಾಜ ಮಾತನಾಡಿ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಕಂಪ್ಲಿ ಸಾಹಿತ್ಯ ಸಿರಿವಂತಿಕೆ ಹೊಂದಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಕಸಾಪ ಎಲ್ಲ ಪಂಥಗಳ ಬರಹಗಾರರ ವೇದಿಕೆಯಾಗಿದೆ. ವಿಚಾರಗಳನ್ನು ಮಂಡಿಸುವಲ್ಲಿ ಕಸಾಪ ಪ್ರಮುಖ ವೇದಿಕೆಯಾಗಿದೆ ಎಂದರು.
ಆರಕ್ಷಕ ನಿರೀಕ್ಷಕ ಕೆ.ಬಿ. ವಾಸುಕುಮಾರ್ ಮಾತನಾಡಿ, ಸಾಹಿತ್ಯ ಅಭಿರುಚಿ ಹೊಂದಿದ್ದಲ್ಲಿ ಸುಖ ಸಂತಸದ ಜೀವನ ಸಾಗಿಸಬಹುದು. ಸಾಹಿತ್ಯ ಜೀವನದ ಪಾಠ ಕಲಿಸುತ್ತದೆ. ಸಾಹಿತ್ಯದಿಂದ ಸಂಸ್ಕಾರ, ಜೀವನಮೌಲ್ಯಗಳ ಪರಿಚಯವಾಗುತ್ತದೆ ಎಂದರು.ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ಸತ್ಯ ಅರುಣೋದಯ ಸೇವಾ ಸಮಿತಿ ಅಧ್ಯಕ್ಷ ಡಿ.ವಿ.ಸತ್ಯನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹೊಸಪೇಟೆ ಗಣಿ ಮಾಲೀಕ ಗೊಗ್ಗ ಚನ್ನಬಸವರಾಜ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಆರಕ್ಷಕ ನಿರೀಕ್ಷಕ ಕೆ.ಬಿ. ವಾಸುಕುಮಾರ್, ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ, ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯ, ಕಸಾಪ ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ, ಎಸ್.ಡಿ. ಬಸವರಾಜ, ಸಿ.ವೆಂಕಟೇಶ, ಬಡಿಗೇರ ಜಿಲಾನ್‌ಸಾಬ್, ಎಸ್.ಶಾಮಸುಂದರಾವ್, ಹಾದಿಮನಿ ಕಾಳಿಂಗವರ್ಧನ, ಅಶೋಕ ಕುಕನೂರು, ಎಲಿಗಾರ ವೆಂಕಟರೆಡ್ಡಿ ಇತರರಿದ್ದರು.