ಶಿರಾಳಕೊಪ್ಪ : ರಾಜ್ಯದಲ್ಲಿ ದಾನಿಗಳ ಸಹಕಾರದಿಂದಲೇ ಅನುದಾನ ಪಡೆದು ಬಹುತೇಕ ಸರ್ಕಾರಿ ಶಾಲೆಗಳು ಪ್ರಾರಂಭವಾಗಿವೆ ಎಂದು ಹೇಳಲು ಸಂತಸ ವಾಗುತ್ತದೆ, ಹಾಗೆಯೇ ಅಂದು ಶಾಲೆಗಳನ್ನು ಪ್ರಾರಂಭಿಸಿದ ಮಹನೀಯರನ್ನು ನಾವು ನೆನೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಇಲ್ಲಿಗೆ ಹತ್ತಿರದ ಜಾವಗಟ್ಟಿ ಗ್ರಾಮದಲ್ಲಿ ನಡೆದ ೧೯೨೪ರಲ್ಲಿ ಪ್ರಾರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೈಸ್ಕೂಲ್, ಪ್ರಾಥಮಿಕ ಶಾಲೆಗಳು ಒಟ್ಟು ೭೬ ಸಾವಿರ ಇದ್ದು, ಅದರಲ್ಲಿ ೫೬ ಸಾವಿರ ಶಾಲೆಗಳು ಅನುದಾನಿತ ಶಾಲೆಗಳಾಗಿವೆ. ಉಳಿದ ಶಾಲೆಗಳು ಸರ್ಕಾರಿ ವ್ಯವಸ್ಥೆಯಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು.
ಇಡಿ ರಾಜ್ಯದಲ್ಲಿ ಒಟ್ಟು ೧ ಕೋಟಿ ೮ ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಮಧ್ಯಾಹ್ನದ ಊಟದ ಜೊತೆಗೆ ಮೊಟ್ಟೆ, ಹಾಲು ಸೇರಿದಂತೆ ಆಹಾರವನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬೂಟು, ಸಾಕ್ಸ್ ಸೇರಿದಂತೆ ಎಲ್ಲವನ್ನು ಕೊಡಲಾಗುತ್ತಿದೆ. ಪೋಷಕರು ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಇದಕ್ಕಾಗಿ ೪೬ ಸಾವಿರ ಕೋಟಿ ರು ವೆಚ್ಚವನ್ನು ಶಿಕ್ಷಣ ಇಲಾಯಿಂದೆ ಮಾಡಲಾಗುತ್ತಿದೆ ಎಂದರು.ಬಂಗಾರಪ್ಪನವರು ಇಂತಹ ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಮುಖ್ಯಮಂತ್ರಿ ಸಿದ್ದದರಾಮಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರು ಬೋರ್‌ವೆಲ್ ಗೆ ಉಚಿತ ವಿದ್ಯುತ್ ಕೊಟ್ಟಿದ್ದರಿಂದ ಇಂದು ರೈತರು ಜೀವನ ಸಾಗಿಸಲು ಸಹಾಯಕವಾಗಿದೆ. ಅದೇ ರೀತಿ ಹಲವಾರು ಯೋಜನೆ ಕೊಟಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬಡವರಿಗೆ ಉಚಿತ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ ಅಡಿ ೨ ಸಾವಿರ ರು, ಮಹಿಳೆಯರಿಗೆ ಉಚಿತ ಬಸ್, ಮನೆಗೆ ಉಚಿತ ವಿದ್ಯುತ್ ಕೊಡಲಾಗಿದೆ ಇವುಗಳನ್ನು ನಾವು ಕೊಟ್ಟಿದ್ದೇವೆ. ಮುಂಬರುವ ದಿನಗಳಲ್ಲಿ ನಿಮಗೆ ಈ ಕೊಡಿಗೆ ಯಾರು ಕೊಟ್ಟರು ಎಂಬುದನ್ನು ನೆನಪಿಟ್ಟು ಕೊಳ್ಳಬೇಕು ಎಂದರು.
ಈ ಶಾಲೆಗೆ ನಾಲ್ಕು ಕೊಠಡಿ, ಸ್ಮಾರ್ಟಕ್ಲಾಸ್ ಗೆ ಒಂದು ಕೊಠಡಿ ಕೇಳಿದ್ದೀರಿ ಅವುಗಳನ್ನು ಕೊಡಲು ಸಿದ್ಧ. ಆದರೆ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಮಕ್ಕಳನ್ನು ಮುಂದೆ ತನ್ನಿ ಎಂದ ಅವರು, ಈ ಶಾಲೆಯಲ್ಲಿ ಶಿಕ್ಷಣ ಪಡೆದ ಹಳೇ ವಿದ್ಯಾರ್ಥಿಗಳ ಸಹಕಾರ ಪಡೆದು ಅಭಿವೃದ್ಧಿಪಡಿಸಿ ಎಂದರು.ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ್‌ಗೌಡ ಮಾತನಾಡಿದರು. ಶಾಲಾ ಸಮಿತಿ ಅಧ್ಯಕ್ಷ ಈಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಗೆ ಅನುದಾನ ಕೊಡಿಗೆ ನೀಡಿದ ಬಸವರಾಜಪ್ಪ ಗೌಡ, ಬಳ್ಳಿಗಾವಿ ಪುಷ್ಪ, ಶಿರಾಳಕೊಪ್ಪ ಪುರಸಭೆ ಅಧ್ಯಕ್ಷೆ ಮಮತ ನಿಂಗಪ್ಪ, ಉಪಾಧ್ಯಕ್ಷ ಮುದಸೀರ್, ಸದಸ್ಯರಾದ ರಾಘವೇಂದ್ರ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯ ಪುಟ್ಟಣ್ಣ ಮತ್ತಿತರರಿದ್ದರು.