- ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರ ಆಶೀರ್ವಚನ । ರಾಯರ ಮಠ ಸುವರ್ಣ ಸಂಭ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಸ್ತುತ ಯುವಜನರನ್ನು ವಿವಾಹ ಮತ್ತು ಸಂತಾನಭಾಗ್ಯ ಸಮಸ್ಯೆಗಳು ಕಾಡುತ್ತಿವೆ. ಅದೆಷ್ಟೋ ಯುವಜನರಿಗೆ ಸರಿಯಾದ ವಯಸ್ಸಿಗೆ ಮಕ್ಕಳಾಗುತ್ತಿಲ್ಲ. ಮದುವೆಯಾದರೂ ದಂಪತಿ ಮಧ್ಯೆ ಸಾಮರಸ್ಯದ ಕೊರತೆ ಉಂಟಾಗುತ್ತಿದೆ. ಇಂತಹ ಗಂಭೀರ ಸಮಸ್ಯೆಗಳಿಂದ ಕಂಗೆಟ್ಟವರು ರಾಯರ ಮೊರೆ ಹೋಗುವುದು ಸೂಕ್ತ ಎಂದು ಶ್ರೀ ಕಾಣಿಯೂರು ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.ನಗರದ ಕೆ.ಬಿ. ಬಡಾವಣೆಯ ದೀಕ್ಷಿತ್ ರಸ್ತೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಸಂಭ್ರಮದಲ್ಲಿ ಭಾನುವಾರ ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದ ಅವರು, ಸಂಸ್ಕಾರವಂತ ಮಕ್ಕಳೇ ದೇಶದ ಆಸ್ತಿಯಾಗಿದ್ದಾರೆ. ಮಕ್ಕಳು ಹುಟ್ಟುವುದು ದೊಡ್ಡ ವಿಷಯವಲ್ಲ. ಆ ಮಕ್ಕಳನ್ನು ಉತ್ತಮ ಸಂಸ್ಕಾರದೊಂದಿಗೆ ಬೆಳೆಸುವುದು ಮುಖ್ಯ. ರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಗುಣವಂತ ಮತ್ತು ಸಂಸ್ಕಾರವಂತ ಮಕ್ಕಳ ಭಾಗ್ಯ ಲಭಿಸಲಿದೆ. ಪತಿ-ಪತ್ನಿಯರು ಜಗಳವಾಡದೇ ಸಾಮರಸ್ಯದಿಂದ ಬದುಕಲು, ತಮ್ಮ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ರಾಯರ ಒಳಗಿರುವ ಶ್ರೀಕೃಷ್ಣ ಪರಮಾತ್ಮ ಅನುಗ್ರಹ ನೀಡಲಿದ್ದಾನೆ ಎಂದು ಹೇಳಿದರು.
ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಸರಿಯಾದ ವಸತಿ ಅಥವಾ ಅನ್ನದ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದರೂ ಮಂತ್ರಾಲಯದ ಶ್ರೀಗಳ ಬಳಿ ಬಂದು ಪ್ರಾರ್ಥಿಸಿದರೆ ಸಾಕು, ಆ ಎಲ್ಲ ಸಂಕಷ್ಟ ದೂರವಾಗಲಿವೆ. ರಾಯರ ಒಳಗೆ ನೆಲೆಸಿದ ಶ್ರೀ ರಾಮಚಂದ್ರ ದೇವರು ಭಕ್ತರ ಮೊರೆಗೆ ಓಗೊಟ್ಟು ಅನ್ನ, ವಸತಿ ಸೇರಿದಂತೆ ಸಕಲ ಸೌಕರ್ಯ ಕರುಣಿಸಲಿದ್ದಾರೆ. ಹರಿ-ಗುರುಗಳ ಸಮಾಗಮವೇ ರಾಯರು. ಕೇವಲ ವ್ಯಾಸರಷ್ಟೇ ಅಲ್ಲದೇ ರಾಮ, ಕೃಷ್ಣ, ನರಸಿಂಹ, ಮಧ್ವಾಚಾರ್ಯರ ಸನ್ನಿಧಾನವೂ ರಾಯರಲ್ಲಿದೆ. ಈ ಎಲ್ಲ ರೂಪಗಳನ್ನು ಸ್ಮರಿಸುತ್ತಾ ರಾಯರ ಸೇವೆ ಮಾಡಿದರೆ ಜೀವನದ ಸಕಲ ಸಂಕಷ್ಟ ನಿವಾರಣೆಯಾಗುತ್ತವೆ ಎಂದರು.- - -
(ಬಾಕ್ಸ್)* ದಾಸವಾಣಿಯೊಂದಿಗೆ ಸುವರ್ಣ ಮಹೋತ್ಸವ ಸಂಪನ್ನ
ದಾವಣಗೆರೆ: ನಗರದ ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರತೀರ್ಥರ 405ನೇ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ಭಾನುವಾರ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಕೈಂಕರ್ಯ ನೆರವೇರಿತು.ನಂತರ ಶ್ರೀ ರಘೂತ್ತಮಚಾರ್ಯ ಉದ್ರಿ "ರಾಮಚಾರಿತ್ರ್ಯ ಮಂಜರಿ " ವಿಷಯದ ಕುರಿತ, ನಂತರ ಬೆಂಗಳೂರಿನ ವ್ಯಾಸನಕೆರೆ ಪ್ರಭಂಜನಾಚಾರ್ಯ "ಶ್ರೀ ರಾಘವೇಂದ್ರ ತಂತ್ರ " ಕುರಿತ ಪ್ರವಚನ ನಡೆಯಿತು. ಕೊನೆಯದಾಗಿ ಶ್ರೀ ಶ್ರೀ 1008 ಶ್ರೀ ವಿದ್ಯಾವಲ್ಲಭ ತೀರ್ಥರು ಅನುಗ್ರಹ ಸಂದೇಶದಲ್ಲಿ ರಾಯರ ಅಗಮ್ಯ ಮಹಿಮೆ ಬಗ್ಗೆ ಪರಿಣಾಮಕಾರಿ ಉಪನ್ಯಾಸ ನೀಡಿದರು. ತೀರ್ಥ ಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಸಂಜೆ 5ರಿಂದ 5.30 ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಗೆ ಸಂಬಂದಿಸಿದಂತೆ ಪ್ರವಚನ ಎನ್.ಪಿ. ಹುಲಿರಾಜ ಅವರಿಂದ ಪ್ರವಚನ, ನಂತರ ಚೆನ್ನೈನ ವಿದ್ವಾನ್ ಶ್ರೀ ಸುಮಂತ್ ಆಚಾರ್ಯರಿಂದ "ದಾಸವಾಣಿ " ಕಾರ್ಯಕ್ರಮದೊಂದಿಗೆ ಸಮಾರಂಭ ಸಂಪನ್ನಗೊಂಡಿತು. ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನ ಕುಮಾರ್, ಕಡೂರು ಪ್ರಾಣೇಶಾಚಾರ್, ವಾಚಸ್ಪತಿ ಆಚಾರ್ಯ ಕಡೂರು, ಡಾ. ಸಿ.ಕೆ .ಆನಂದತೀರ್ಥಾಚಾರ್, ಕಂಪ್ಲಿ ಗುರುರಾಜಾಚಾರ್, ವೆಂಕಟೇಶ ನವರತ್ನ ಇದ್ದರು.- - -
(ಟಾಪ್ ಕೋಟ್) ರಾಯರ ಅಂತರಂಗದಲ್ಲಿ ನರಸಿಂಹ, ರಾಮ, ಕೃಷ್ಣ ಹಾಗೂ ವೇದವ್ಯಾಸರ ರೂಪಗಳಿವೆ. ಈ ನಾಲ್ಕೂ ರೂಪಗಳು ರಾಯರೊಳಗೆ ಇದ್ದುಕೊಂಡು ಭಕ್ತರ ಕಷ್ಟಗಳನ್ನು ನಿವಾರಿಸುತ್ತವೆ. ವಿಶೇಷವಾಗಿ ರಾಯರೊಳಗೆ ನರಹರಿ ರೂಪವಿದೆ. ಭಕ್ತರು ಅನುಭವಿಸುತ್ತಿರುವ ಅನೇಕ ದುರಿತ ಹಾಗೂ ಅನಾಚಾರದ ಸಮಸ್ಯೆಗಳನ್ನು ರಾಯರ ಬಳಿ ಹೋಗಿ ಪ್ರಾರ್ಥಿಸಿದಾಗ ರಾಯರೊಳಗಿನ ನರಸಿಂಹ ದೇವರು ಆ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾರೆ. ಹೀಗಾಗಿ, ರಾಯರೊಳಗೆ ರಾಯರಿದ್ದಾರೆ ಎಂಬುದು ಕೇವಲ ಮಾತಲ್ಲ, ಅದು ಭಕ್ತರ ಪಾಲಿನ ಪರಮಸತ್ಯ.- ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠ.
- - --(ಫೋಟೋ ಇದೆ).