ಕನ್ನಡ ಭಾಷೆ, ಏಳಿಗೆಗೆ ಕೊಡುಗೆ ನೀಡಿದವರನ್ನು ಸ್ಮರಿಸಿ

KannadaprabhaNewsNetwork |  
Published : Nov 30, 2024, 12:47 AM IST
ಬಳ್ಳಾರಿಯ ಶ್ರೀಕೃಷ್ಣ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಬೆಂಗಳೂರಿನ ವಿವಿಯ ಕುಲಪತಿ ಡಾ.ಎಸ್.ಎಂ.ಜಯಕರ ಅವರು ಚಾಲನೆ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಕರ್ನಾಟಕದ ಪ್ರದೇಶಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗದಲ್ಲಿ ಪ್ರಾದೇಶಿಕವಾರು ಮಾತನಾಡುವ ಭಾಷೆ ಶೈಲಿ, ಆಚಾರ-ವಿಚಾರ, ಉಡುಗೆ-ತೊಡುಗೆ ಬದಲಾವಣೆಗೊಳ್ಳುತ್ತದೆ.

ಬಳ್ಳಾರಿ: ಕನ್ನಡ ಭಾಷೆಗೆ ಅಗಾಧವಾದ ಇತಿಹಾಸವಿದೆ. ಅನೇಕ ಶಾಸನ, ಸಾಹಿತ್ಯ, ವಚನ, ಕೃತಿ, ಲೇಖನಗಳನ್ನು ಕೊಡುಗೆ ನೀಡುವಲ್ಲಿ ಕನ್ನಡ ಮೇರುಸ್ಥಾನ ಹೊಂದಿದೆ ಎಂದು ಹಿರಿಯ ಲೇಖಕ ಕುಂ.ವೀರಭದ್ರಪ್ಪ ಹೇಳಿದರು.ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ ಸಂಭ್ರಮ-ಕರ್ನಾಟಕ ರಾಜ್ಯೋತ್ಸವ-69 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡವನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಆದಿಕವಿ ಪಂಪ, ಕುಮಾರವ್ಯಾಸ, ಬಸವಣ್ಣ, ಅಲ್ಲಮಪ್ರಭು, ಪುರಂದರ ದಾಸ, ಕನಕದಾಸ, ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಕನ್ನಡ ಭಾಷೆ-ಸಾಹಿತ್ಯ ಏಳಿಗೆಗೆ ಕೊಡುಗೆ ನೀಡಿದ ಅನೇಕ ಮಹನೀಯರನ್ನು ಸ್ಮರಿಸಬೇಕಿರುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎಂ.ಜಯಕರ ಮಾತನಾಡಿ, ಶ್ರೀಮಂತ ಸಂಸ್ಕೃತಿ, ಮನಸೂರೆಗೊಳ್ಳುವ ಕಲೆ, ಭೌಗೋಳಿಕ ವಿಶೇಷತೆ ಹಾಗೂ ವೈವಿಧ್ಯತೆಯಿಂದ ಕೂಡಿದ ಕನ್ನಡ ನಾಡಿನಲ್ಲಿ ಜನಿಸುವುದೇ ಪುಣ್ಯ. ಕರ್ನಾಟಕದ ಪ್ರದೇಶಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗದಲ್ಲಿ ಪ್ರಾದೇಶಿಕವಾರು ಮಾತನಾಡುವ ಭಾಷೆ ಶೈಲಿ, ಆಚಾರ-ವಿಚಾರ, ಉಡುಗೆ-ತೊಡುಗೆ ಬದಲಾವಣೆಗೊಳ್ಳುತ್ತದೆ. ಎಲ್ಲೇ ಇದ್ದರೂ ನಾವಾಡುವ ಮಾತು, ಉಸಿರಾಡುವ ಗಾಳಿ, ನಮ್ಮ ನಡೆ-ನುಡಿಯಲ್ಲೂ ಕನ್ನಡತವನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲೂ ಏಕತೆಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು, ಬಳ್ಳಾರಿಯ ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ.ಚನ್ನಬಸವಣ್ಣ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ, ಕುಲಸಚಿವ ಎಸ್.ಎನ್ ರುದ್ರೇಶ್, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್, ಹಣಕಾಸು ಅಧಿಕಾರಿ ನಾಗರಾಜ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಬರ್ಟ್ ಜೋಸ್, ಸಿಂಡಿಕೇಟ್ ಸದಸ್ಯರಾದ ಪೀರ್ ಬಾಷಾ, ಶಿವಕುಮಾರ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿಭಾಗದ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಸುವರ್ಣ ಕರ್ನಾಟಕ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಕನ್ನಡ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಜರುಗಿತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಬಳ್ಳಾರಿಯ ಶ್ರೀಕೃಷ್ಣ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಬೆಂಗಳೂರಿನ ವಿವಿಯ ಕುಲಪತಿ ಡಾ.ಎಸ್.ಎಂ. ಜಯಕರ ಚಾಲನೆ ನೀಡಿ ಮಾತನಾಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ