ರಾಮನಾಮ ಸ್ಮರಣೆಯಿಂದ ನೆಮ್ಮದಿಯ ಬದುಕು ಪ್ರಾಪ್ತಿ: ಅನಿಲ್‌ಶಾಸ್ತ್ರಿ

ಪಿತೃವಾಕ್ಯ ಪಾಲಕನಾಗಿ, ಏಕಪತ್ನಿ ವ್ರತಸ್ಥನಾಗಿ ಎಲ್ಲರೂ ಪೂಜಿಸುವ ಆರಾಧ್ಯದೈವ. ರಾಮನಾಮ ಪಠಣೆ ಪಾಯಸದಷ್ಟೇ ಸಿಹಿಯಾಗಿದ್ದು, ಮಕ್ಕಳಿಗೆ ಇಂತಹ ಅದರ್ಶ ಪುರುಷೋತ್ತಮರ ಚರಿತ್ರೆ ತಿಳಿ ಹೇಳುವ ಕೆಲಸವಾದಲ್ಲಿ ನಮ್ಮ ನಾಡು ರಾಮ ರಾಜ್ಯವಾಗಲಿದೆ

KannadaprabhaNewsNetwork | Published : Apr 27, 2024 7:49 PM IST

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಆದರ್ಶವೇ ಬದುಕಾಗಿಸಿಕೊಂಡು ಬದುಕಿದ ಮರ್ಯಾದ ಪುರುಷೋತ್ತಮ ರಾಮನ ನಾಮಸ್ಮರಣೆಯಿಂದ ಮಾನಸಿಕ ಕ್ಲೇಶ ಕಳೆದು ಸನ್ನಡತೆಯ ವ್ಯಕ್ತಿತ್ವ, ನೆಮ್ಮದಿಯ ಬದುಕು ಕಾಣಬಹುದು ಎಂದು ವೇದ ಬ್ರಹ್ಮ ಶ್ರೀ ಅನಿಲ್‌ಶಾಸ್ತ್ರಿ ಹೇಳಿದರು.

ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಮನವಮಿಯ 9ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರಾಮ ಒಂದು ಅದ್ಭುತ ಶಕ್ತಿ. ಸನಾತನ ಹಿಂದೂ ಧರ್ಮದಲ್ಲಿ ರಾಮನಿಗೆ ವಿಶೇಷ ಸ್ಥಾನವಿದೆ ಎಂದರು.

ಪಿತೃವಾಕ್ಯ ಪಾಲಕನಾಗಿ, ಏಕಪತ್ನಿ ವ್ರತಸ್ಥನಾಗಿ ಎಲ್ಲರೂ ಪೂಜಿಸುವ ಆರಾಧ್ಯದೈವ. ರಾಮನಾಮ ಪಠಣೆ ಪಾಯಸದಷ್ಟೇ ಸಿಹಿಯಾಗಿದ್ದು, ಮಕ್ಕಳಿಗೆ ಇಂತಹ ಅದರ್ಶ ಪುರುಷೋತ್ತಮರ ಚರಿತ್ರೆ ತಿಳಿ ಹೇಳುವ ಕೆಲಸವಾದಲ್ಲಿ ನಮ್ಮ ನಾಡು ರಾಮ ರಾಜ್ಯವಾಗಲಿದೆ ಎಂದರು.

ಎಲ್ಲರ ಮನಸ್ಸಿನಲ್ಲಿ ಪ್ರೀತಿಯಿಂದ ನೆಲೆಯೂರಿರುವ ರಾಮನ ಸ್ಮರಣೆಯಿಂದ ಬಹುತೇಕ ಸಂಕಷ್ಟ ದೂರವಾಗಲಿದೆ. ಇಂಡೋನೇಷಿಯಾ ಮತ್ತಿತರ ರಾಷ್ಟ್ರಗಳಲ್ಲಿ ರಾಮನಿಗೆ ವಿಶೇಷ ಸ್ಥಾನಮಾನ ಇರುವುದು ನಮ್ಮ ಸನಾತನ ಸಂಸ್ಕೃತಿಯ ಹಿರಿಮೆ. ಇಂತಹ ಧರ್ಮ, ಆಚರಣೆಗಳನ್ನು ಗೌರವಿಸುವ ಕೆಲಸ ಮನದಾಳದಿಂದ ಎಲ್ಲರಲ್ಲೂ ಮೂಡಬೇಕಿದೆ ಎಂದು ನುಡಿದರು.

ನಿತ್ಯ ಬೆಳಗ್ಗೆ, ಸಂಜೆ ರಾಮ ನಾಮ ಪಾರಾಯಣ, ರಾಮತಾರಕ ನಾಮ ಪಠಣೆ, ಉಪನ್ಯಾಸ, ಪಂಚಾಮೃತ ಅಭಿಷೇಕ, ಮಂಗಳದ್ರವ್ಯಗಳಿಂದ ಆರಾಧನೆ, ಮಹಿಳೆಯರಿಂದ ಭಜನೆ, ಕೀರ್ತನೆ, ಧೂಪ, ದೀಪ ಪೂಜೆ, ನೈವೇದ್ಯ ಸಮರ್ಪಣೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಪಟ್ಟಾಭಿರಾಮದೇವನ ಭಾವಚಿತ್ರಕ್ಕೆಸುಗಂಧ ಪುಷ್ಪಗಳ ಅಲಂಕಾರ, ಪುಷ್ಪಾರ್ಚನೆ ಸೇವೆಯಂತಹ ಹಲವು ಪೂಜಾ ಕೈಂಕರ್ಯಗಳು ಜರುಗಿದವು. ಕೆ.ಎಸ್. ಅನಂತಸ್ವಾಮಿ, ಕೆ.ಬಿ. ವೆಂಕಟೇಶ್, ಮಹಾಬಲಶರ್ಮ, ಗಣೇಶ್‌ರಾವ್, ಮಹಾಬಲರಾವ್, ಪ್ರಭಾಕರ್, ಅನಿಲ್‌ಶಾಸ್ತ್ರೀ, ಗೌರಿಶಂಕರ್, ಕೆ.ಎಸ್. ಪರಮೇಶ್ವರಯ್ಯ, ಶ್ರೀಹರಿ, ಶ್ರೀಹರ್ಷ, ಶಂಕರ್, ನರಸಿಂಹ, ಮಧು, ಸುಮಾ, ಭಾಗ್ಯಲಕ್ಷ್ಮೀ, ಗಿರಿಜಾ, ವೇದಾವತಿ, ಅನುರಾಧ, ವಿಜಯಲಕ್ಷ್ಮೀ, ರತ್ನಮ್ಮ, ನಂದಿನಿ, ಕಲಾವತಿ, ಶಶಿಕಲಾ, ರಜಿನಿ, ಸ್ವರ್ಣ ಉಪಸ್ಥಿತರಿದ್ದರು.

Share this article