ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರ ತೆಗೆಸಿದ್ದು ಖಂಡನೀಯ: ರೂಪಾಲಿ ನಾಯ್ಕ

KannadaprabhaNewsNetwork |  
Published : Nov 07, 2023, 01:32 AM IST
12 | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ನಂಬಿಕೆ, ಆಚಾರ, ಸಂಪ್ರದಾಯಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ.

ಕಾರವಾರ:

ಕಲಬುರಗಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲು ಬಂದ ಮಹಿಳೆಯರ ಮಂಗಲಸೂತ್ರ, ಕಿವಿಯೋಲೆ, ಕಾಲುಂಗುರ ತೆಗೆಸುವ ಮೂಲಕ ಮಹಿಳೆಯರಿಗೆ ಮಾನಸಿಕ ಹಿಂಸೆ ಹಾಗೂ ದೌರ್ಜನ್ಯ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕಿ ರೂಪಾಲಿ ನಾಯ್ಕ, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವುದಾಗ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಮ್ಮ ಸಂಸ್ಕೃತಿ, ಸಂಪ್ರದಾಯದಲ್ಲಿ ಮಹಿಳೆಗೆ ತಾಳಿ, ಕಿವಿಯೋಲೆ, ಕಾಲುಂಗುರಕ್ಕೆ ಮಹತ್ವ ಇದೆ. ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಇವುಗಳನ್ನು ತೆಗೆಯುವ ಮೂಲಕ ಮಹಿಳೆಯರನ್ನು ಮಾನಸಿಕವಾಗಿ ಕುಗ್ಗಿಸಲಾಗಿದೆ. ಕೇವಲ ದೈಹಿಕವಾಗಿ ಹಲ್ಲೆ ನಡೆಸುವುದಷ್ಟೇ ದೌರ್ಜನ್ಯ ಅಲ್ಲ. ತಾಳಿ ತೆಗೆಸುವ ಮೂಲಕ ಮಹಿಳೆಯರ ಮೇಲೆ ಮಾನಸಿಕವಾಗಿ ದೌರ್ಜನ್ಯ ನಡೆಸಲಾಗಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ನಂಬಿಕೆ, ಆಚಾರ, ಸಂಪ್ರದಾಯಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಲಬುರಗಿಯ ಪರೀಕ್ಷಾ ಕೇಂದ್ರದಲ್ಲೂ ನಡೆದಿರುವುದು ಅದರ ಮುಂದುವರಿದ ಭಾಗವೇ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಕೆಪಿಎಸ್ ಸಿ ಪರೀಕ್ಷಾ ನಿಯಮಾವಳಿಗಳಲ್ಲಿ ತಾಳಿ, ಕಿವಿಯೋಲೆ, ಕಾಲುಂಗುರ ತೆಗೆಯಬೇಕೆಂದು ಎಲ್ಲೂ ಹೇಳಿಲ್ಲ. ಈ ಬಗ್ಗೆ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಾಗಲೂ ಪಟ್ಟು ಬಿಡದೆ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಮಾನಸಿಕವಾಗಿ ಆಘಾತಗೊಂಡ ಮಹಿಳೆಯರು ಪರೀಕ್ಷೆ ಬರೆಯಲು ಹೇಗೆ ಸಾಧ್ಯವಾಗುತ್ತದೆ ಎಂದು ರೂಪಾಲಿ ಪ್ರಶ್ನಿಸಿದ್ದಾರೆ.ಮಹಿಳೆಯರಿಗೆ ನೀಡುವ ಮಾನಸಿಕ, ದೈಹಿಕ ಹಿಂಸೆ, ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು. ಇದೇ ಉದ್ದೇಶದಿಂದ ನ್ಯಾಯಾಲಯದ ಮೆಟ್ಟಿಲೇರಲು ಯೋಚಿಸಿರುವುದಾಗಿ ತಿಳಿಸಿದ್ದಾರೆ. ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಇಲ್ಲ:

ಬೆಂಗಳೂರಿನಲ್ಲಿ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಅವರನ್ನು ಹತ್ಯೆ ಮಾಡಿದ ಘಟನೆ ಖಂಡನೀಯ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಹಿಳಾ ಅಧಿಕಾರಿಗಳಿಗೂ ರಕ್ಷಣೆ ಇಲ್ಲ ಎಂಬಂತಾಗಿದೆ. ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಮಹಿಳೆಯರ ಹತ್ಯೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ಸರ್ಕಾರ ಕೂಡಲೇ ಕ್ರಮಕೈಗೊಂಡು ಮಹಿಳೆಯರಿಗೆ ಬದುಕಲು ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ರೂಪಾಲಿ ನಾಯ್ಕ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’