ಕನ್ನಡಪ್ರಭ ವಾರ್ತೆ ಕೊಪ್ಪಳ
ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪರಿಕರಗಳ ವೆಚ್ಚವನ್ನು ರೈತರು ಭರಿಸಬೇಕು ಎನ್ನುವ ಆದೇಶ ಹಿಂಪಡೆಯಲು ಆಗ್ರಹಿಸಿ ಸಂಸದ ಸಂಗಣ್ಣ ಕರಡಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಸೋಮವಾರ ಆರಂಭಿಸಿದರು.ಜಿಲ್ಲಾಡಳಿತ ಭವನದ ಎದುರು ಹಾಕಿದ ಪೆಂಡಾಲ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅವರು, ಬೇಡಿಕೆ ಈಡೇರುವ ವರೆಗೂ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.ಈ ವೇಳೆಯಲ್ಲಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಆದೇಶ ರೈತರ ಬದುಕಿನಲ್ಲಿ ಕರಾಳ ಅಧ್ಯಾಯ ಆರಂಭವಾಗುವಂತೆ ಮಾಡುತ್ತಿದೆ. ರೈತರು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ, ತಂತಿ ಸೇರಿದಂತೆ ಮೊದಲಾದ ಪರಿಕರಗಳನ್ನು ತಾವೇ ಖರೀದಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಬರದಿಂದ ಬೆಂದು ಹೋದ ರೈತರು ಹೇಗೆ ಖರೀದಿ ಮಾಡಲು ಸಾಧ್ಯ? ₹2 ಲಕ್ಷ ವೆಚ್ಚವಾಗುವ ಹೊರೆಯನ್ನು ರೈತರು ಹೇಗೆ ತಾನೆ ನಿಭಾಯಿಸಲು ಸಾಧ್ಯ? ಎಂದು ಪ್ರಶ್ನಿಸಿದರು.ರೈತರ ಬದುಕಿಗೆ ಬರೆ ಬಿದ್ದಂತಾಗಿದೆ. ಸರ್ಕಾರದ ಆದೇಶ ಹಿಂಪಡೆಯುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇನೆ. ಅದು ಎಷ್ಟೇ ದಿನಗಳಾದರೂ ಸರಿ, ಹಿಂದೆ ಸರಿಯುವುದಿಲ್ಲ. ಆದರೆ, ಸರ್ಕಾರ ಆದೇಶವನ್ನು ಹಿಂಪಡೆದರೆ, ಕೂಡಲೇ ಉಪವಾಸ ಸತ್ಯಾಗ್ರಹ ಕೈಬಿಡುತ್ತೇನೆ ಎಂದರು.ಜತೆಗೆ ಸರ್ಕಾರ ಕನಿಷ್ಠ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸರ್ಕಾರ ಕೂಡಲೇ ರೈತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕು. ತನ್ನ ಆದೇಶ ಹಿಂಪಡೆಯಬೇಕು. ಸಂಸದರು ಕರಾಳ ಆದೇಶ ಖಂಡಿಸಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ನಾವು ಸಹ ಧರಣಿ ನಡೆಸುತ್ತೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.ಕೆಕೆಆರ್‌ಪಿ ಪಕ್ಷದ ಮುಖಂಡ, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಮಾತನಾಡಿ, ಸಂಸದರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಇದು ನ್ಯಾಯಯುತ ಬೇಡಿಕೆ. ಸರ್ಕಾರ ಈ ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.ಸರ್ಕಾರವನ್ನು ಪ್ರತಿನಿಧಿಸುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಕ್ಷಣ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು. ಸತ್ಯಾಗ್ರಹ ಮಾಡುತ್ತಿರುವುದು ಏಕೆ ಎನ್ನುವುದನ್ನು ಅರ್ಥ ಮಾಡಿಕೊಂಡು, ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.ಪಕ್ಷಾತೀತವಾಗಿ ಅನೇಕ ನಾಯಕರು ಸತ್ಯಾಗ್ರಹ ಬೆಂಬಲಿಸಿ, ಸಂಸದರೊಂದಿಗೆ ಧರಣಿಯಲ್ಲಿ ಪಾಲ್ಗೊಂಡರು. ಜಿಲ್ಲಾಡಳಿತ ಭವನದ ಎದುರು ರಾತ್ರಿಯೂ ಸತ್ಯಾಗ್ರಹ ಮುಂದುವರೆದಿದೆ.ಸತ್ಯಾಗ್ರಹದಲ್ಲಿ ಬಸವಲಿಂಗಪ್ಪ ಭೂತೆ, ಶಂಕ್ರಪ್ಪ ಚೌಡಿ, ಗಣೇಶ ಹೊರತಟ್ನಾಳ, ಗೀತಾ ಪಾಟೀಲ್, ಕೀರ್ತಿಗೌಡ ಪಾಟೀಲ್, ಶೋಭಾ ನಗರಿ, ಅಜಯ ಪಾಟೀಲ್, ತಿಪ್ಪೇರುದ್ರಸ್ವಾಮಿ, ವೀರೇಶ ಸಜ್ಜನ, ಎಪಿಎಂಸಿ ಬಸವರಾಜ ಇದ್ದರು.