ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಅತ್ಯಂತ ಜನಸಂದಣಿಯ ಸರ್ಕಾರಿ ಜೂನಿಯರ್ ಕಾಲೇಜು, ಗುರುಭವನ, ಸಾಂಸ್ಕೃತಿಕ ಭವನದ ಮುಂಭಾಗ ಸಹಿತ ವಿವಿಧ ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ಪರವಾನಿಗೆಯಿಲ್ಲದೆ ಅನಧಿಕೃತವಾದ ಅಂದಾಜು 50ಕ್ಕೂ ಅಧಿಕ ತಿಂಡಿ ಅಂಗಡಿ, ವಿವಿಧ ಗೂಡು ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಅನಧಿಕೃತ ಬೀದಿ ಬದಿ ಅಂಗಡಿಗಳಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು ಎಂಬ ದೂರುಗಳು ಆಗಾಗ ಕೇಳಿ ಬರುತ್ತಿದ್ದವು. ಸಾರ್ವಜನಿಕರು ಪುರಸಭೆಯವರಿಗೆ ಮೌಖಿಕ ದೂರುಗಳನ್ನು ಸಲ್ಲಿಸಿದ ಉದಾಹರಣೆಗಳು ಇವೆ. ಅನಧಿಕೃತವಾಗಿ ಪುಟ್‌ಪಾತ್‌ನಲ್ಲಿನ ಅಂಗಡಿಗಳು ದಿನನಿತ್ಯ ಎಲ್ಲೆಂದರಲ್ಲಿ ತೆರೆದುಕೊಳ್ಳುತ್ತಿದ್ದು, ಇದನ್ನು ತಡೆಯುವುದು ಪುರಸಭೆ ಅಧಿಕಾರಿಗಳಿಗೆ ಸವಾಲಾಗಿದ್ದು, ನಿರ್ದಾಕ್ಷಿಣ್ಯವಾಗಿ ಪುರಸಭೆ ಅಧಿಕಾರಿಗಳು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಯಶಸ್ವಿಯಾಗಿದೆ. ಪಟ್ಟಣದ ವಿವಿಧ ಕಡೆ ಇದೇ ರೀತಿ ಅಂಗಡಿಗಳು ವಿಪರೀತವಾಗಿದ್ದು, ಅವುಗಳನ್ನು ತೆರವುಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಒಟ್ಟಿನಲ್ಲಿ ಪುರಸಭೆಯ ಕಾರ್ಯ ಪ್ರಶಂಶನೀಯ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಭರತ್ ಕುಮಾರ್, ಸಮುದಾಯ ಸಂಘಟನಾಧಿಕಾರಿ ಸುರೇಶ್, ಆರೋಗ್ಯ ಅಧಿಕಾರಿ ನಾಗಭೂಷಣ್, ನವಾಜ್ ಅಹ್ಮದ್ ಸಹಿತ ಪೊಲೀಸ್ ಇಲಾಖೆ, ಪೌರಕಾರ್ಮಿಕ ಸಿಬ್ಬಂದಿ ಪಾಲ್ಗೊಂಡಿದ್ದರು.
ಜನಪ್ರತಿನಿಧಿಗಳು, ನಾಯಕರು ಶಿಫಾರಸು ಮಾಡಿ ಪುನಃ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿ ಪಟ್ಟಣದ ಸಹಜ ಸೌಂದರ್ಯಕ್ಕೆ ಧಕ್ಕೆ ತರದಂತೆ ನಾಗರಿಕರು ಆಗ್ರಹಿಸಿದ್ದಾರೆ. ಜನ ಸಾಮಾನ್ಯರ ಭಾವನೆಗೆ ಸ್ಪಂದಿಸುವ ಆಡಳಿತ ಪುರಸಭೆಯಿಂದ ದೊರೆಯಲಿ ಎಂಬುದು ಎಲ್ಲರ ಅಪೇಕ್ಷೆಯಾಗಿದೆ.