ಅಹಿತಕರ ಘಟನೆ ನಡೆಯುವ ಮೊದಲೇ ಕಬ್ಬಿಣದ ವಿದ್ಯುತ್ ಕಂಬ ತೆರುವುಗೊಳಿಸಿ

KannadaprabhaNewsNetwork |  
Published : Jul 17, 2025, 12:30 AM IST
ಪೋಟೋಕನಕಗಿರಿಯ ಪಟ್ಟಣ ಪಂಚಾಯತಿಯ ಸಭಾಂಗಣದಲ್ಲಿ ಸಾಮಾನ್ಯಸಭೆ ನಡೆಯಿತು.  | Kannada Prabha

ಸಾರಾಂಶ

ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಎನ್‌ಒಸಿ ಕಡ್ಡಾಯವಾಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ.

ಕನಕಗಿರಿ:

ಸಾವು-ನೋವು ಸಂಭವಿಸುವ ಮುನ್ನ ಪಟ್ಟಣದಲ್ಲಿ ಹಲವು ವರ್ಷಗಳಿಂದ ಇರುವ ಕಬ್ಬಿಣದ ವಿದ್ಯುತ್ ಕಂಬಗಳ ತೆರವಿಗೆ ಕ್ರಮಕೈಗೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಆಗ್ರಹಿಸಿದ್ದಾರೆ.

ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆಯಲ್ಲಿ ಜೆಸ್ಕಾಂ ಇಲಾಖೆಯ ಆನಂದ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ಪಟ್ಟಣದ ನಾನಾ ವಾರ್ಡ್, ಓಣಿಗಳಲ್ಲಿ ಹಲವು ವರ್ಷಗಳಿಂದ ಕಬ್ಬಿಣದ ವಿದ್ಯುತ್ ಕಂಬ ತೆರವು ಮಾಡುವಂತೆ ತಿಳಿಸಲಾಗಿದ್ದರೂ ತೆರವಿಗೆ ಕ್ರಮಕೈಗೊಂಡಿಲ್ಲ. ಮಳೆಗಾಲ ಆರಂಭಗೊಂಡಿದ್ದು ಗಾಳಿಯೂ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಕಬ್ಬಿಣದ ವಿದ್ಯುತ್ ಬಿದ್ದು ಸಾವು ನೋವಾದರೆ ಯಾರು ಜವಾಬ್ದಾರಿ? ಎಂದು ಹಲವು ಸದಸ್ಯರು ಪ್ರಶ್ನಿಸಿದರು.

ಇನ್ನೂ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಎನ್‌ಒಸಿ ಕಡ್ಡಾಯವಾಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಸದಸ್ಯ ಹನುಮಂತ ಬಸರಿಗಿಡ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಸ್ಕಾಂ ಇಲಾಖೆಯ ಆನಂದ, ಪಟ್ಟಣದಲ್ಲಿ ಅಪಾಯದಲ್ಲಿರುವ ೧೧೦ ಕಬ್ಬಿಣ ವಿದ್ಯುತ್ ಕಂಬ ತೆರವು ಮಾಡಲಾಗಿದೆ. ಇನ್ನೂಳಿದ ಕಂಬಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ರಾಜಬೀದಿಯ ಎಡ ಮತ್ತು ಬಲ ಬದಿಯಲ್ಲಿ ಗುಣಮಟ್ಟದ ವಿದ್ಯುತ್ ತಂತಿ ಮತ್ತು ಪರಿವರ್ತಕ ಅಳವಡಿಸುವ ಕುರಿತು ಈಗಾಗಲೇ ಕ್ರಿಯಾಯೋಜನೆ ರೂಪಿಸಿದ್ದು, ₹ ೧.೩೬ ಕೋಟಿ ಅನುದಾನ ಅಗತ್ಯವಿದೆ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ. ಹಂತ-ಹಂತವಾಗಿ ಎಲ್ಲ ಕೆಲಸ ಪೂರ್ಣಗೊಳಿಸುವುದಾಗಿ ತಿಳಿಸಿದರು.

ದ್ಯಾಮವ್ವನಗುಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಮಾಡಲು ಅಡುಗೆ ಸಹಾಯಕರು ಹರಸಾಹಸಪಡುತ್ತಿದ್ದಾರೆ. ಶಾಲಾ ಕೊಠಿಡಿಯಲ್ಲಿಯೇ ಅಡುಗೆ ಮಾಡುತ್ತಿದ್ದಾರೆ. ಅಡುಗೆ ಕೋಣೆ ತಿಪ್ಪೆಗುಂಡಿಯಾಗಿದ್ದು, ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಕ್ಷಣವೇ ಕ್ರಮಕೈಗೊಂಡು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಸಭೆಯಲ್ಲಿದ್ದ ಶಿಕ್ಷಣ ಸಂಯೋಜಕ ಆಂಜನೇಯಸ್ವಾಮಿ ಅವರನ್ನು ಸದಸ್ಯ ರಾಜಸಾಬ ನಂದಾಪೂರ ಒತ್ತಾಯಿಸಿದರು.

ತುಂಗಭದ್ರಾ ನದಿಯಿಂದ ತಾಲೂಕಿನ ಬಂಕಾಪುರದ ಬಳಿ ಕೇಂದ್ರ ಪುರಷ್ಕೃತ ಅಮೃತ-೨.೦ ಯೋಜನೆ ಅನುದಾನದಡಿಯಲ್ಲಿ ಕನಕಗಿರಿ-ಕಾರಟಗಿ ನಗರಗಳಿಗೆ ₹ ೨೦೪ ಕೋಟಿ ಅನುದಾನ ಮಂಜೂರಾಗಿದೆ. ಈ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ಪಟ್ಟಣದ ವಿವಿಧೆಡೆ ೬೭ ಕಿಲೋ ಮೀಟರ್‌ ಪೈಪ್‌ಲೈನ್ ಕಾಮಗಾರಿ ನಡೆಯಲಿದೆ. ಈಗಾಗಲೇ ೧೦ ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಗಾರ ಕಾಮಗಾರಿಗಳು ಆರಂಭಗೊಂಡಿವೆ ಎಂದು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸುನೀಲ್ ನಾಯಕ ತಿಳಿಸಿದರು.

೧ ಮತ್ತು ೪ನೇ ವಾರ್ಡ್‌ನಲ್ಲಿ ಮರಂ ಹಾಕದೆ ₹ ೫೦ ಸಾವಿರ ಬಿಲ್‌ನ್ನು ಜೆಇ ಮಂಜುನಾಥ ನಾಯಕ ಹಾಗೂ ಈ ಹಿಂದಿನ ಮುಖ್ಯಾಧಿಕಾರಿಯಾಗಿದ್ದ ದತ್ತಾತ್ರೇಯ ಹೆಗಡೆ ಎತ್ತುವಳಿ ಮಾಡಿದ್ದು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸದಸ್ಯ ಶೇಷಪ್ಪ ಪೂಜಾರ ಆಗ್ರಹಿಸಿದರು.

ಈ ವೇಳೆ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ, ಅನಿಲ ಬಿಜ್ಜಳ, ಶರಣೇಗೌಡ, ಸಿದ್ದೇಶ ಕಲುಬಾಗಿಲಮಠ, ನೂರಸಾಬ್‌ ಗಡ್ಡಿ, ತನುಶ್ರೀ ಟಿಜೆ, ನಂದಿನಿ ಓಣಿಮನಿ, ಶೈಜನಾಬೇಗಂ ಗುಡಿಹಿಂದಲ, ಹುಸೇನಬೀ ಸಂತ್ರಾಸ್ ಇದ್ದರು. ಪಪಂ ಸಿಬ್ಬಂದಿ ವಿರುದ್ಧ ಡಿಸಿಗೆ ದೂರು

ಸರಿಯಾಗಿ ಕರ್ತವ್ಯ ನಿರ್ವಹಿಸದೇ ಬೇಜಾಬ್ದಾರಿ ತೋರುತ್ತಿರುವ ಮತ್ತು ₹ ೩ರಿಂದ ₹ ೪ ಲಕ್ಷ ದುರ್ಬಳಕೆ ಮಾಡಿಕೊಂಡಿರುವ ಪಪಂ ಸಿಬ್ಬಂದಿ ವಿಜಯಕುಮಾರ ಗಡಾದ ವಿರುದ್ಧ ಸದಸ್ಯರೆಲ್ಲರೂ ಆಕ್ರೋಶ ವ್ಯಕ್ತಪಡಿಸಿ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸದಸ್ಯರು ಸಾಮೂಹಿಕ ಪತ್ರ ಬರೆದಿದ್ದಾರೆ.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ