ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿ ಜನಿವಾರ ತೆಗೆಸಿರುವುದು ಸಮಸ್ತ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದಂತಾಗಿದೆ. ಈ ಕೂಡಲೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಬೇಕು. ಜೊತೆಗೆ ಸಂಬಂಧಪಟ್ಟ ಶಿಕ್ಷಣ ಸಚಿವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಆಗ್ರಹಿಸಿದ್ದಾರೆ.ಪಟ್ಟಣದ ತಮ್ಮ ನಿವಾಸದ ದಾಸೋಹ ನಿಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಜನಿವಾರ ಧಾರಣ ಅಥವಾ ಉಪನಯನ ಸಂಸ್ಕಾರವನ್ನು ಯಜ್ಞೋಪವೀತ ಎಂದೂ ಕೂಡ ಕರೆಯಲಾಗುತ್ತದೆ. ಅಂದರೆ ಯಜ್ಞ ನಡೆಸಬಲ್ಲ ಸಂಪೂರ್ಣ ಹಕ್ಕು ಹೊಂದಿದವನು ಎಂದರ್ಥ. ಜನಿವಾರ ಧಾರಣೆಯನ್ನೇ ಸಂಸ್ಕೃತದಲ್ಲಿ ಯಜ್ಞೋಪವೀತವೆಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಮಗುವಿಗೆ ಶಿಕ್ಷಣ ಆರಂಭಿಸಬೇಕೆಂದ್ರೆ ಮೊದಲು ಆ ಮಗುವಿಗೆ ಯಜ್ಞೋಪವೀತ (ಜನಿವಾರ ಧಾರಣೆ)ಸಂಸ್ಕಾರ ನೀಡುವುದು ಸನಾತನ ಹಿಂದೂ ಸಂಸ್ಕೃತಿ ಪದ್ಧತಿಯಾಗಿದೆಂದು ತಿಳಿಸಿದರು.
ಬ್ರಾಹ್ಮಣ ಸಮಾಜ ಸೇರಿದಂತೆ ವಿವಿಧ ಸಮಾಜದವರು ಜನಿವಾರ ಧಾರಣೆ ಮಾಡಿದರೇ, ಲಿಂಗಾಯತ ಪಂಗಡದವರು ಲಿಂಗ ಧರಿಸುತ್ತಾರೆ. ಮದುವೆಯಾದ ಮಹಿಳೆ ಮಾಂಗಲ್ಯ, ಬಳೆ, ಕಾಲುಂಗುರ, ಮೂಗುತಿ, ಕಿವಿಯೋಲೆ ಹೀಗೆ ಹಲವು ವಸ್ತುಗಳನ್ನು ಧರಿಸುತ್ತಾರೆ. ಆದರೇ ಸದ್ಯದ ಕಾಂಗ್ರೆಸ್ ಸರಕಾರ ಸನಾತನ ಹಿಂದೂ ಧರ್ಮ ವಿರೋಧಿ ನೀತಿ ಹೆಚ್ಚಾಗಿ ಜಾರಿಗೆ ತರುತ್ತಿದೆ. ಇಡೀ ವಿಶ್ವದಲ್ಲಿಯೇ ಭಾರತ ಅತಿ ಹೆಚ್ಚು ಹಿಂದೂಗಳನ್ನು ಹೊಂದಿದ ಸನಾತನ ಹಿಂದೂ ರಾಷ್ಟ್ರವಾಗಿದೆ. ಜನಿವಾರ ತೆಗೆಯುವ ಅಧಿಕಾರ ಯಾವ ರಾಷ್ಟ್ರಗಳು ಕೂಡ ಮಾಡಿಲ್ಲ. ಆದರೇ ನಮ್ಮ ಹಿಂದೂ ರಾಷ್ಟ್ರದ ಕರ್ನಾಟಕದಲ್ಲಿ ಹಿಂದೂ ಸಂಸ್ಕೃತಿಗೆ ಮಾರಕವಾಗಿ ಮಾರ್ಪಟ್ಟಿದೆ. ಜನಿವಾರ ತೆಗೆದ ಅಪಮಾನಿಸಿದ ದೇಶದ ಏಕೈಕ ರಾಜ್ಯ ಸರಕಾರ ಕರ್ನಾಟಕವಾಗಿದೆ ಎಂದರೆ ತಪ್ಪಾಗಲಾರದೆಂದರು.ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಘಟನೆಗೆ ಸಂಬಂಧಿಸಿದಂತೆ ಆಯಾ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಡಾ.ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿಯೂ ಕೂಡ ಜನಿವಾರ ಧರಿಸಬಾರದು ಎಂದು ಎಲ್ಲೂ ಹೇಳಿಲ್ಲ. ಎಲ್ಲ ಧರ್ಮದವರಿಗೆ ಅವರವರ ಧರ್ಮ ರಕ್ಷಣೆ ಪರಿಪಾಲನೆ ಮುಕ್ತ ಅವಕಾಶ ಸಂವಿಧಾನದಲ್ಲಿ ಕಲ್ಪಿಸಿದ್ದಾರೆ. ಸದ್ಯ ಜನಿವಾರ ತೆಗೆಸಿದ್ದು ಸಂವಿದಾನ ವಿರೋಧಿಯಾಗಿದೆ. ಇಂತಹ ಘಟನೆಯಿಂದ ಅಪಮಾನ ಮಾಡಿದ ಸರಕಾರದ ನಡೆ ತೀವ್ರವಾಗಿ ಸಮಸ್ತ ಹಿಂದೂ ಸಮಾಜದ ಪರವಾಗಿ ಖಂಡಿಸುತ್ತೇನೆ. ಇದು ಹೀಗೆ ಮುಂದುವರೆದರೆ ರಾಜ್ಯದ ಎಲ್ಲ ಹಿಂದೂ ಸಮಾಜ ಬಾಂಧವರು ಒಗ್ಗಟ್ಟಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಸಮಾಜದ ಮುಂಡರಾದ ಬಿ.ಪಿ.ಕುಲಕರ್ಣಿ, ವಾಸುದೇವ ಶಾಸ್ತ್ರೀ, ಎಸ್.ಆರ್.ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಜನಿವಾರ ತೆಗೆಸಿದ್ದು ಮಾತ್ರವಲ್ಲದೇ ಅನೇಕ ರೀತಿಯಲ್ಲಿ ಸಮಾಜಕ್ಕೆ ಅಪಮಾನಿಸುತ್ತಿರುವ ಘಟನೆಗಳು ಮೇಲೆಂದ ಮೇಲೆ ನಡೆಯುತ್ತಲೆ ಇವೆ. ಆದರೇ ನಾವೇನು ಕೈಕಟ್ಟಿ ಬಳೆ ತೊಟ್ಟು ಕುಳಿತಿಲ್ಲ, ನಾವು ಒಗ್ಗಟ್ಟಾದರೆ ಪರಿಣಾಮ ಎದರಿಸಬೇಕಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಎಲ್ಲ ಧರ್ಮದವರನ್ನು ಅತ್ಯಂತ ಗೌರವದಿಂದ ಕಾಣುವಂತಾಗಬೇಕು ಎಂದರು.ಈ ವೇಳೆ ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಬಾಬುರಾವ ಕುಲಕರ್ಣಿ, ರಾಜೇಂದ್ರ ಭೋಸಲೆ, ವಿಠ್ಠಲ ದೇಶಪಾಂಡೆ, ಪುಟ್ಟು ಕುಲಕರ್ಣಿ, ನಾರಾಯಣ ಧುರ್ವೇ, ಭರತೇಶ ಮಂಕಣಿ, ರಮೇಶ ದೊಡಮನಿ, ರಾಜು ಪದಕಿ, ವಾಸು ಸಾಲವಾಡಗಿ, ಲಕ್ಷ್ಮಣರಾವ ದೇಶಪಾಂಡೆ, ಅಶೋಕ ಚಿನಿವಾರ, ರಾಜು ಬಳ್ಳೊಳ್ಳಿ, ಸಂಜು ಬಾಗೇವಾಡಿ, ಹಣಮಂತ ನಲವಡೆ, ಅಶೋಕ ರಾಠೋಡ, ಸಿದ್ದು ಹಿರೇಮಠ, ರಾಘವೇಂದ್ರ ನಲವಡೆ, ಪಿ ಎಲ್ ಕುಲಕರ್ಣಿ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಮುಖಂಡರಾದ ಗೌರಮ್ಮ ಹುನಗುಂದ, ಪ್ರೀತಿ ಕಂಬಾರ, ರೇಖಾ ಕೊಂಡಗೂಳಿ, ಕಾವೇರಿ ಕಂಬಾರ ಸೇರಿದಂತೆ ವಿವಿಧ ಜನಿವಾರ ಸಮಾಜ ಬಾಂಧವರು ಇದ್ದರು.