ರಾಹುಲ್ ಜೀ ದೊಡ್ಮನಿ
ನಗರೋತ್ಥಾನ 4ನೇ ಹಂತದ ₹3 ಕೋಟಿ ಅನುದಾನದಲ್ಲಿ ಅಫಜಲ್ಪುರ ಪಟ್ಟಣದ ಮುಖ್ಯರಸ್ತೆಯ ಅಗಲೀಕರಣ, ಚರಂಡಿ ನಿರ್ಮಾಣ ಮತ್ತು ಬೀದಿ ದೀಪಗಳ ಅಳವಡಿಕೆ ಕಾಮಗಾರಿ ಕಳೆದ 2 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಅಫಜಲ್ಪುರದ ಜನ ನಿತ್ಯ ಹೈರಾಣಾಗುವಂತಾಗಿದೆ.
ಅಫಜಲ್ಪುರ ಪಟ್ಟಣದ ಮುಖ್ಯರಸ್ತೆ ಅಗಲೀಕರಣಗೊಳಿಸಬೇಕೆಂದು ನಗರೋತ್ಥಾನ ಯೋಜನೆಯಡಿ ಕ್ರೀಯಾಯೋಜನೆ ಸಿದ್ದಪಡಿಸಿ 2023ರ ಅ.12ರಂದು ಪುರಸಭೆ ವತಿಯಿಂದ ಬಸವೇಶ್ವರ ವೃತ್ತ, ದುಧನಿ ರಸ್ತೆ, ಅಂಬೇಡ್ಕರ್ ವೃತ್ತ, ತಹಸಿಲ್ ಕಚೇರಿ ಸೇರಿದಂತೆ ಮುಖ್ಯರಸ್ತೆಯ ಎರಡು ಬದಿಯಲ್ಲಿದ್ದ ಗೂಡಂಗಡಿಗಳು, ಹಣ್ಣು, ತರಕಾರಿ ಬಂಡಿಗಳು, ಫಾಸ್ಟ್ ಫುಡ್ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಲಾಯಿತು. ಅದಾದ ಬಳಿಕ ಇಂದಿನ ತನಕ ಕಾಮಗಾರಿ ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ.₹3 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆಯ ಅಗಲೀಕರಣ, ಎರಡು ಬದಿಯ ಚರಂಡಿ, ಬೀದಿದೀಪಗಳ ಅಳವಡಿಕೆ ಮಾಡಿಸಬೇಕು. ಆದರೆ ವರ್ಷಾನುಗಟ್ಟಲೇ ಚರಂಡಿಗಾಗಿ ನೆಲ ಅಗೆದು ಹಾಗೆ ಬಿಟ್ಟವರು ಇತ್ತಿಚಿಗೆ ಚರಂಡಿ ಪೂರ್ಣಗೊಳಿಸಿದ್ದಾರೆ. ಚರಂಡಿಗಾಗಿ ಅಗೆದ ಗುಂಡಿಯಿಂದ ಪಟ್ಟಣದ ಜನ, ವಾಹನ ಸವಾರರು, ವ್ಯಾಪಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು, ಮಕ್ಕಳು ವರ್ಷಗಟ್ಟಲೇ ಸಮಸ್ಯೆ ಅನುಭವಿಸುವಂತಾಯಿತು. ಈಗ ರಸ್ತೆ ಅಗಲೀಕರಣಕ್ಕಾಗಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ನೆಲ ಅಗೆಯಲಾಗುತ್ತಿದೆ.
ಜಿಲ್ಲಾಧಿಕಾರಿ ತಾಕೀತಿಗಿಲ್ಲ ಕಿಮ್ಮತ್ತು
ಒಳರಸ್ತೆಗಳಿಗೆಲ್ಲ ಮುಕ್ತಿ ಯಾವಾಗ? ಪಟ್ಟಣದ ಮುಖ್ಯರಸ್ತೆಯ ಅಗಲೀಕರಣಕ್ಕಾಗಿ ನಡೆದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದರಿಂದ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿದಂತಾಗಿದೆ. ಇನ್ನೊಂದೆಡೆ ಪಟ್ಟಣದ ಒಳ ರಸ್ತೆಗಳು ತೀರಾ ಕಿರಿದಾಗಿದ್ದು ದ್ವಿಚಕ್ರ ವಾಹನ ರಸ್ತೆ ಪಕ್ಕದಲ್ಲಿ ನಿಲ್ಲಿಸಿದರೆ ಇನ್ನೊಂದು ವಾಹನ ಹೋಗುವುದಕ್ಕು ಕಷ್ಟವಾಗುವ ಪರಿಸ್ಥಿತಿ ಇದೆ. ಇಂತಹ ಕಿರಿದಾದ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ಇತ್ಯ ನರಕ ಯಾತನೆ ಅನುಭವಿಸುವಂತಾಗಿದೆ.2024ರ ಜೂನ್ 12 ರಂದು ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮನೆ ಒಳಗೆ ಮಳೆ ನೀರು ಬರುತ್ತಿವೆ ಎಂದು ಪಿಡ್ಬ್ಲೂಡಿ ಇಲಾಖೆ, ಪುರಸಭೆಯವರು ಹಾಗೂ ತಾಲೂಕು ಆಡಳಿತದವರೆಲ್ಲ ಕೂಡಿಕೊಂಡು ರಾತೋ ರಾತ್ರಿ ಅಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿ ಒಂದೆರಡು ದಿನಗಳಲ್ಲಿ ಚರಂಡಿ, ಕಂಪೌಂಡ ಗೋಡೆ ಕಟ್ಟಿಸಿದರು. ಆದರೆ ಪಟ್ಟಣದ ಸಾವಿರಾರು ನಿವಾಸಿಗಳು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದರೂ ಕೂಡ ರಸ್ತೆಗಳ ಅಗಲೀಕರಣವಿಲ್ಲ, ಬೀದಿ ದೀಪಗಳಿಲ್ಲ, ಚರಂಡಿಗಳು ತುಂಬಿ ದುರ್ನಾತ ಬೀರುತ್ತವೆ, ಆದರೆ ಅನುದಾನದ ಖರ್ಚು ಮಾತ್ರ ಆಗುತ್ತಿದೆ. ಇದೆಲ್ಲಾ ನೋಡಿದರೆ ಇಲ್ಲಿ ವಾಸವಿರುವ ಜನರಿಗೆ ಕಣ್ಣಿಲ್ಲವೋ? ಅಥವಾ ಸೌಲಭ್ಯಗಳು ಕೇಳುವುದೇ ಅಪರಾಧವೋ ಎನ್ನುವಂತಾಗಿದೆ. ಬಸವರಾಜ್ ಮಾಲಗತ್ತಿ ನಿವಾಸಿ
ಪಟ್ಟಣದಲ್ಲಿನ ಚರಂಡಿಗಳು ಕೊಳಚೆಯಿಂದ ತುಂಬಿ ನಿಂತು ದುರ್ನಾತ ಬೀರುತ್ತಿವೆ. ಮಳೆಗಾಲ ಬರುವ ಮುನ್ನ ಚರಂಡಿಗಳನ್ನು ಸ್ವಚ್ಚಗೊಳಿಸಿದರೆ ಜನರಿಗೆ ಸಮಸ್ಯೆ ಆಗುವುದಿಲ್ಲ. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಅನುಭವಿಸುವುದು ಪಟ್ಟಣದ ನಿವಾಸಿಗಳೇ ಹೊರತು ಅಧಿಕಾರಿಗಳಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ವಿಷಯದಲ್ಲಿ ಗಂಭೀರವಾಗಿ ಚಿಂತನೆ ಮಾಡಲಿ.ಸುರೇಶ ಅವಟೆ