ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ: ಕಲ್ಲಂಗಡಿ ಹಣ್ಣುಗಳನ್ನು ರೈತರು ಹೆಚ್ಚಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ದರ ಕಡಿಮೆಯಾಗಿದ್ದು, ರೈತರು ನಷ್ಟದ ಆತಂಕ ಎದುರಿಸುತ್ತಿದ್ದಾರೆ.ಒಂದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯಲು ₹50 ರಿಂದ ₹60 ಸಾವಿರ ಖರ್ಚು ಬರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಲ್ಲಂಗಡಿ ಇಳುವರಿ ಹೆಚ್ಚಾಗಿದೆ. ಬಹಳಷ್ಟು ರೈತರು ಕಲ್ಲಂಗಡಿ ಬೆಳೆದಿದ್ದಾರೆ, ಒಂದು ಎಕರೆಯಲ್ಲಿ ಸುಮಾರು 250ರಿಂದ 300 ಕ್ವಿಂಟಲ್ ಇಳುವರಿ ಬಂದಿದೆ. ಆದರೆ ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಹೀಗಾಗಿ ದರ ಕಡಿಮೆಯಾಗಿದೆ.
ವಾಹನದಲ್ಲಿ ಮಾರಾಟ: ಕೆಲವು ರೈತರು ತಾವು ಬೆಳೆದ ಕಲ್ಲಂಗಡಿಯನ್ನು ಪಿಕಪ್ ವಾಹನ ಅಥವಾ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಊರೂರು ಅಲೆದು ಒಂದಕ್ಕೆ ₹30-40ನಂತೆ ಮಾರಾಟ ಮಾಡುತ್ತಿದ್ದಾರೆ. ಗಾತ್ರಕ್ಕೆ ತಕ್ಕಂತೆ ಬೆಲೆ ನಿರ್ಧರಿಸಲಾಗುತ್ತಿದ್ದು, ಜೋಡಿಗೆ ₹60ರಂತೆಯೂ ವ್ಯಾಪಾರ ಮಾಡುತ್ತಾರೆ. ಬೆಲೆ ಕಡಿಮೆ ಇದ್ದರೂ ಗ್ರಾಹಕರು ಕಲ್ಲಂಗಡಿಗೆ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.ಕಳೆದ ವರ್ಷ ಇದೇ ಏಪ್ರೀಲ್ ತಿಂಗಳಲ್ಲಿ ಒಂದು ಕೆಜಿಗೆ ₹50ರಿಂದ ₹60ರ ವರೆಗೆ ಮಾರಾಟವಾಗಿವೆ. ಕಳೆದ ವರ್ಷ ಕಲ್ಲಂಗಡಿ ಬೆಳೆಯಿಂದ ರೈತರಿಗೆ ಲಾಭವಾಗಿತ್ತು. ಈ ವರ್ಷ ಕಲ್ಲಂಗಡಿ ಬೆಳೆಯಿಂದ ನಷ್ಟವಾಗುವ ಭೀತಿ ಕಾಡುತ್ತಿದೆ ಎನ್ನುತ್ತಾರೆ ಕಲ್ಲಂಗಡಿ ಬೆಳೆದ ರೈತ ಹನುಮಪ್ಪ ಹುನಗುಂದ.
ಒಂದೂವರೆ ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು ಸುಮಾರು ₹60 ಸಾವಿರ ಖರ್ಚು ಮಾಡಿದ್ದೇನೆ. ಜಮೀನಿನಲ್ಲಿ ಕ್ವಿಂಟಲ್‌ಗಟ್ಟಲೆ ಕಲ್ಲಂಗಡಿ ಇದೆ. ಕೆಲವು ಕೆಟ್ಟು ಹೋಗಿವೆ. ಬೆಲೆ ಇಲ್ಲದಿರುವುದರಿಂದ ಊರೂರು ಅಲೆಯುತ್ತಾ ಮಾರಾಟ ಮಾಡುತ್ತಿದ್ದೇವೆ ಎಂದು ಕಲ್ಲಂಗಡಿ ಬೆಳೆಗಾರ ಲಕ್ಷ್ಮಣ ಮುಧೋಳ ಹೇಳಿದರು.ಈ ವರ್ಷ ಕಲ್ಲಂಗಡಿ ಹಣ್ಣುಗಳ ಬೆಲೆ ಬಹಳ ಕಡಿಮೆ, ಒಂದು ಕೆಜಿಗೆ ₹20-30 ಇದೆ. ಬೇಸಿಗೆ ಇರುವುದರಿಂದ ಹಾಗೂ ಬೆಲೆ ಕಡಿಮೆ ಇರುವುದರಿಂದ ದಿನಾಲೂ ಕಲ್ಲಂಗಡಿಗಳನ್ನು ತಂದು ಕುಟುಂಬದ ಜತೆ ತಿನ್ನುತ್ತಿದ್ದೇವೆ ಎಂದು ಗ್ರಾಹಕರಾದ ಸಂತೋಷ ತೋಟದ ಹಾಗೂ ಮಲ್ಲಿಕಾರ್ಜುನ ಕುಷ್ಟಗಿ ಹೇಳಿದರು.