ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಪ್ರತಿ ತಿಂಗಳು ೪೦ ಸಾವಿರ ರು.ಗೌರವಧನ, ಉಪಾಧ್ಯಕ್ಷರು ಪಾಲ್ಗೊಳ್ಳುವ ಪ್ರತಿ ಸಭೆಗೆ ೧೨೦೦ ರು. ಸಭಾ ಭತ್ಯೆ, ಸದಸ್ಯರಿಗೆ ಪ್ರತಿ ಸಭೆಗೆ ೧,೧೦೦ ರು. ಸಭಾ ಭತ್ಯೆಯನ್ನು ನಿಗದಿಪಡಿಸಲಾಗಿದೆ.
ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರಿಗೆ ಮಾಸಿಕ ೨೫ ಸಾವಿರ ರು. ಗೌರವಧನ, ಪ್ರತಿ ಸಭೆಗೆ ಸದಸ್ಯರಿಗೆ ೧ ಸಾವಿರ ರು. ಸಭಾ ಭತ್ಯೆ ನಿಗದಿಪಡಿಸಿದ್ದರೆ, ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಮಾಸಿಕ ೪೦ ಸಾವಿರ ರು. ಗೌರವಧನ, ಪ್ರತಿ ಸಭೆಗೆ ಸದಸ್ಯರಿಗೆ ೧,೨೦೦ ರು. ಸಭಾ ಭತ್ಯೆ ನಿಗದಿಪಡಿಸಲಾಗಿದೆ.ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಿಂಗಳಿಗೆ ಗರಿಷ್ಠ ಎರಡು ಸಭೆಗಳನ್ನು ಆಯೋಜಿಸತಕ್ಕದ್ದು. ಗ್ಯಾರಂಟಿ ಯೋಜನೆಗಳು ವಿವಿಧ ಇಲಾಖೆಗಳ ಮೂಲಕ ಜಾರಿಯಾಗುವುದರಿಂದ ಸಮನ್ವಯ ಸಾಧಿಸುವ ದೃಷ್ಟಿಯಿಂದ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಸಭೆಯನ್ನು ನಡೆಸಲು ಜಿಲ್ಲಾಮಟ್ಟದಲ್ಲಿ ಜಿಪಂ ಸಭಾಂಗಣ, ತಾಲೂಕು ಮಟ್ಟದಲ್ಲಿ ತಾಪಂ ಸಭಾಂಗಣವನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದೆ. ಜಿಲ್ಲಾಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಆಯಾ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಬದಲಿಗೆ ಆಯಾ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.ಜಿಲ್ಲಾ ಮಟ್ಟದ ಸದಸ್ಯ ಕಾರ್ಯದರ್ಶಿಗಳಾದ ಸಿಇಒ ಹಾಗೂ ತಾಲೂಕು ಮಟ್ಟದ ಸದಸ್ಯ ಕಾರ್ಯದರ್ಶಿಯಾದ ಇಒ ಅವರು ಸಮಿತಿಗೆ ಜಿಪಂ ಕಚೇರಿ ಆವರಣದಲ್ಲೇ ಕಚೇರಿ ವ್ಯವಸ್ಥೆ, ಕಚೇರಿಗೆ ಅಗತ್ಯವಿರುವ ಪೀಠೋಪಕರಣಗಳು ಹಾಗೂ ಸಮಿತಿಯ ಸಭೆ ನಡೆಯುವ ದಿನಗಳಲ್ಲಿ ತಮ್ಮ ವ್ಯಾಪ್ತಿಗೆ ಬರುವ ಸಿಬ್ಬಂದಿಯನ್ನು ನಿಯೋಜಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವಧನ, ಸಭಾ ಭತ್ಯೆಯನ್ನು ಜಿಪಂ ಸಿಇಒ ಮತ್ತು ತಾಪಂ ಇಒ ಲೆಕ್ಕ ಶೀರ್ಷಿಕೆಗಳಿಂದ ಭರಿಸಬೇಕು.ಜಿಲ್ಲಾಮಟ್ಟದ ಸಮಿತಿಯ ಅಧ್ಯಕ್ಷರು ಮತ್ತು ಪ್ರಾದೇಶಿಕ ರಾಜ್ಯ ಉಪಾಧ್ಯಕ್ಷರನ್ನು ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಗೆ ಆಹ್ವಾನಿಸುವುದು. ಅದೇ ರೀತಿ ತಾಲೂಕು ಮಟ್ಟದಲ್ಲಿ ಶಾಸಕರು ನಡೆಸುವ ತ್ರೈಮಾಸಿಕ ಕೆಡಿಪಿ ಸಭೆಗೆ ತಾಲೂಕು ಅಧ್ಯಕ್ಷರನ್ನು ಆಹ್ವಾನಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ವಿಮಲಾಕ್ಷಿ ಆದೇಶದಲ್ಲಿ ತಿಳಿಸಿದ್ದಾರೆ.