ಉಳಿದ ₹1 ಕೋಟಿಯಲ್ಲಿ ಗಾಂಧಿ ತಂಗಿದ್ದ ಕೊಠಡಿ ಸೇರಿ 5 ಕೊಠಡಿಗಳ ನವೀಕರಣ ನಡೆದಿದೆ
ಬಿ.ರಾಮಪ್ರಸಾದ್ ಗಾಂಧಿ ಹರಪನಹಳ್ಳಿ
ಮಹಾತ್ಮ ಗಾಂಧೀಜಿಗೆ ಒಂದು ರಾತ್ರಿ ಆಶ್ರಯ ನೀಡಿ ಶತಮಾನ ದಾಟಿ ಸಾಗುತ್ತಿರುವ ಹರಪನಹಳ್ಳಿ ನಗರದ ಬ್ರಿಟೀಷರ ಕಾಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಹೈಟೆಕ್ ದುರಸ್ತಿ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಾತ್ಮ ಗಾಂಧೀಜಿ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ 1934ರಂದು ಮಾ.2 ಶನಿವಾರ ಸಂಜೆ ದಾವಣಗೆರೆಯಿಂದ ಬಳ್ಳಾರಿಗೆ ಸಂಚರಿಸುವಾಗ ಇಲ್ಲಿಯ ಸಪಪೂ ಕಾಲೇಜಿನ ಒಂದು ಕೊಠಡಿಯಲ್ಲಿ ಒಂದು ರಾತ್ರಿ ತಂಗಿ ಇಲ್ಲಿಯ ಜನರಿಗೆ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ ತುಂಬಿ ಹೋಗಿದ್ದರು.
ಅವರ ಸವಿನೆನಪಿಗಾಗಿ ಗಾಂಧೀಜಿ ತಂಗಿದ್ದ ಕೊಠಡಿಯಲ್ಲಿ ಪ್ರೌಢ ಶಾಲಾ ತರಗತಿ ನಡೆದರೂ ಶಿಕ್ಷಕರು, ಮಕ್ಕಳು ಯಾರೂ ಸಹ ಚಪ್ಪಲಿ ಧರಿಸಿ ಕೊಠಡಿ ಒಳಗೆ ಹೋಗುತ್ತಿರಲಿಲ್ಲ, ಅದನ್ನು ಮನಗಂಡು ದಿ. ಮಾಜಿ ಶಾಸಕ ಎಂ.ಪಿ. ರವೀಂದ್ರ ಏಕಶಿಲಾ ಮಹಾತ್ಮ ಗಾಂಧೀಜಿ ಮೂರ್ತಿ ಕೆತ್ತಿಸಿ ಪ್ರತಿಷ್ಟಾಪನೆ ಮಾಡಿ ಪ್ರತಿ ವರ್ಷ ಗಾಂಧಿ ಜಯಂತಿಯನ್ನು ಅಲ್ಲಿಯ ಆವರಣದಲ್ಲಿ ಆಚರಿಸುತ್ತಿದ್ದರು.
ದಿನದಿಂದ ದಿನಕ್ಕೆ ಸಪಪೂ ಕಾಲೇಜು ಕಟ್ಟಡ ಶಿಥಿಲಗೊಳ್ಳುತ್ತಾ ಸಾಗಿದ್ದನ್ನು ಗಮನಿಸಿದ ಶಾಸಕಿ ಎಂ.ಪಿ. ಲತಾ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಲ್ಲಿ ಹಿಂದಿನ ಬ್ರಿಟೀಷರ ಕಾಲದ ಕಟ್ಟಡ ಹಾಗೇ ಉಳಿಸಿಕೊಂಡು ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿ ₹3ಕೋಟಿ ಮಂಜೂರು ಮಾಡಿಸಿದ್ದರು.
ಆ ಸಂದರ್ಭದಲ್ಲಿ ಗಾಂಧೀಜಿ ಪ್ರತಿಮೆಯನ್ನು ಗಾಂಧಿ ತಂಗಿದ್ದ ಕೊಠಡಿಯಿಂದ ಕಾಲೇಜಿನ ಮುಂಭಾಗದ ಇನ್ನೊಂದು ಕೊಠಡಿಗೆ ಸ್ಥಳಾಂತರಗೊಳಿಸಿದ್ದರು. 2024 ಜೂನ್ ನಲ್ಲಿ ನೀಲ್ ಕನ್ಸ್ರ ಟ್ರಕ್ಸನ್ಸ್ ಎಂಬುವವರು ಕಾಮಗಾರಿ ಆರಂಭಿಸಿದರು. ₹2 ಕೋಟಿ ಹಣದಲ್ಲಿ 14 ಕೊಠಡಿ ಇರುವ ಬ್ಲಾಕ್ , ಹೆಂಚು, ಬಣ್ಣ ಕಾಂಪೌಂಡು ಪ್ಲೋರಿಂಗ್ ಹೀಗೆ ನವೀಕರಣ ಮಾಡಿದ್ದಾರೆ,
ಉಳಿದ ₹1 ಕೋಟಿಯಲ್ಲಿ ಗಾಂಧಿ ತಂಗಿದ್ದ ಕೊಠಡಿ ಸೇರಿ 5 ಕೊಠಡಿಗಳ ನವೀಕರಣ ನಡೆದಿದೆ ಎರಡು ವರ್ಷ ಮೂರು ತಿಂಗಳಾದರೂ ಕಾಮಗಾರಿ ಪೂರ್ಣ ಗೊಂಡಿಲ್ಲ, ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
ಇದು ಇಷ್ಟಾದರೆ ಪುನಃ ಕಲ್ಯಾಣ ಕರ್ನಾಟಕ ಅಭಿವೃದ್ದಿ ಯೋಜನೆಯಲ್ಲಿ ಮತ್ತೆ ₹1.50 ಕೋಟಿ ಅನುದಾನ ಕಾರ್ಯಕ್ರಮ ನಡೆಸಲು ಸುಸಜ್ಜಿತ ವೇದಿಕೆ, ಸಿಸಿ ಕ್ಯಾಮೇರಾ ಅಳವಡಿಸಿ ಒಟ್ಟಿನಲ್ಲಿ ಗಾಂಧಿ ಭವನ ಮಾಡಲು ಟೆಂಡರ್ ಹಂತದಲ್ಲಿದೆ, ಆದರೆ ಮೊದಲಿನ ಕಾಮಗಾರಿಯೇ ಎರಡು ವರ್ಷ ದಾಟಿದರೂ ಪೂರ್ಣಗೊಂಡಿಲ್ಲ, ಪ್ರತಿ ವರ್ಷ ಗಾಂಧಿ ಜಯಂತಿ ಬರುವ ಸಂದರ್ಭದಲ್ಲಿ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ, ಏಕ ಕೃಷ್ಣಶಿಲೆಯಲ್ಲಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಯಾವಾಗ ಗಾಂಧಿ ತಂಗಿದ್ದ ಕೊಠಡಿಗೆ ವಾಪಾಸ್ ಬರುತ್ತದೆ, ಗಾಂಧೀಜಿಯ ಚಳವಳಿಯ ನೆನಪುಗಳು ಜನತೆಗೆ ಯಾವಾಗ ಕಾಣುತ್ತವೆ ಎಂಬುದು ಪ್ರಶ್ನೆಯಾಗಿದೆ.
ಮೇಲ್ವಿಚಾರಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯವರು ಸಂಬಂಧಪಟ್ಟ ಗುತ್ತಿಗೆದಾರರಿಗೆ ಬಿಗಿಯಾಗಿ ಹೇಳಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂಬುದು ಜನತೆಯ ಆಶಯವಾಗಿದೆ.
ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಶೀಘ್ರ ಮುಗಿಸಿ ಉದ್ಘಾಟನೆ ಮಾಡಿಸುತ್ತೇವೆ ಎಂದು ಹರಪನಹಳ್ಳಿ ಎಇಇ ಲೋಕೋಪಯೋಗಿ ಇಲಾಖೆ ರಾಘವೇಂದ್ರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.