ಹುಬ್ಬಳ್ಳಿ:
ಹೀಗೆ ಇಂದಿರಾ ಗಾಜಿನ ಮನೆಯಲ್ಲಿ ಶುಕ್ರವಾರ ಮಕ್ಕಳ ಸಂಭ್ರಮಕ್ಕೆ ಸಂಗೀತದ ಮೆರುಗು ನೀಡಿತ್ತು. ಖ್ಯಾತ ಬಾಲಗಾಯಕಿ ಮಹನ್ಯ ಪಾಟೀಲ ಅವರ ಸುಮಧುರ ಗಾಯನಕ್ಕೆ ಪುಟಾಣಿಗಳು ಮನಸೋತು ಕುಣಿದು ಕುಪ್ಪಳಿಸಿದರು. ನೆಚ್ಚಿನ ಗೀತೆಗಳನ್ನು ಆಲಿಸುತ್ತಾ ಹಾಡಿನ ಸಾಲುಗಳಿಗೆ ಧ್ವನಿಗೂಡಿಸಿ ಸಂಭ್ರಮಿಸಿದರು.
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಮಹನ್ಯಾ ಅವರ ಗಾಯನ ವಿಶೇಷ ಆಕರ್ಷಣೆಯಾಗಿತ್ತು. ವೇದಿಕೆ ಏರುತ್ತಿದ್ದಂತೆ "ಉಘೇ... ಉಘೇ... ಮಾದಪ್ಪ " ಹಾಡಿನ ಮೂಲಕ ಗಾಯನ ಆರಂಭಿಸಿದ ಅವರು, ಮೊದಲ ಸಾಲು ಹಾಡುತ್ತಿದ್ದಂತೆ ಮಕ್ಕಳಿಂದಲೂ "ಉಘೇ... ಉಘೇ... " ಎಂಬ ಪ್ರತಿಧ್ವನಿ ಕೇಳಿಬಂತು. ಗಾಯಕಿಯೊಂದಿಗೆ ಮಕ್ಕಳು ಧ್ವನಿಗೂಡಿಸುತ್ತಿದ್ದ ದೃಶ್ಯ ನೋಡುಗರ ಗಮನ ಸೆಳೆಯಿತು.ಬಳಿಕ "ಬೆಳ್ಳಿ ಮೂಡಿತೋ ಕೋಳಿ ಕೂಗಿತೋ ", "ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ", "ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನ ನೀನಾಗು ", "ಯಾರೇ ನೀನು ರೋಜಾ ಹೂವೆ " ಸೇರಿದಂತೆ ಒಂದರ ಹಿಂದೆ ಒಂದರಂತೆ ಹಲವು ಜನಪ್ರಿಯ ಗೀತೆಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.
ಕುಂಚ ಹಿಡಿದು ಬಿಳಿಹಾಳೆಯ ಮೇಲೆ ತಮ್ಮ ಕಲ್ಪನೆಗಳಿಗೆ ಬಣ್ಣ ತುಂಬುತ್ತಿದ್ದ ಮಕ್ಕಳಿಗೆ ಮಹನ್ಯ ಅವರ ಗಾಯನ ಹೊಸ ಹುರುಪು ನೀಡಿತು. ಚಿತ್ರಕಲೆಯ ಸೃಜನಶೀಲತೆ ಮತ್ತು ಸಂಗೀತದ ಸೊಬಗು ಒಂದೆಡೆ ಸೇರಿದ ಅಪರೂಪದ ಕ್ಷಣಗಳಿಗೆ ಇಂದಿರಾ ಗಾಜಿನ ಮನೆ ಸಾಕ್ಷಿಯಾಯಿತು. ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜತೆಗೆ ಅವರ ಮನರಂಜನೆಗೂ ಆದ್ಯತೆ ನೀಡಿದ ಕಾರ್ಯಕ್ರಮದಲ್ಲಿ ಮಹನ್ಯಾ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.