ಸಾಗರ: ಪ್ರಖ್ಯಾತ ರಂಗ ನಿರ್ದೇಶಕ, ನೀನಾಸಂ ರಂಗ ಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ ಚಿದಂಬರರಾವ್ ಜಂಬೆ (೭೭) ಶನಿವಾರ ಹೆಗ್ಗೋಡಿನಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ.೧೯೪೯ ರಲ್ಲಿ ಸಾಗರ ತಾಲೂಕು ಅಡ್ಡೇರಿ ಗ್ರಾಮದಲ್ಲಿ ಜನಿಸಿದ ಜಂಬೆ ಅವರು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದು, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿತಿದ್ದರು. ೧೯೮೨ರಿಂದ ೨೦೦೪ರವರೆಗೆ ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ರಂಗಕರ್ಮಿಗಳನ್ನು ರೂಪಿಸಿದವರು. ನಂತರ ಮೈಸೂರು ರಂಗಾಯಣ ನಿರ್ದೇಶಕರಾಗಿ, ಸಾಣೇಹಳ್ಳಿ ಮತ್ತು ಎನ್.ಎಸ್.ಡಿ. ಬೆಂಗಳೂರು ಅಧ್ಯಾಯದಲ್ಲಿ ಸೇವೆ ಸಲ್ಲಿಸಿದರು.ದೇಶದ ಹಲವು ಪ್ರಖ್ಯಾತ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದ ಅವರಿಗೆ ರಂಗಭೂಮಿಯಲ್ಲಿ ದೇಶದ ಎಲ್ಲೆಡೆ ಶಿಷ್ಯರಿದ್ದಾರೆ. ತಲೆದಂಡ, ಭಾಸ ಭಾರತ, ಚಿರೇಬಂಡಿವಾಡೆ, ಕತ್ತಲೆಗೆ ಹತ್ತು ತಲೆ, ಲೋಕ ಶಾಕುಂತಲ, ತ್ರಿವಳಿ ಸಹೋದರಿಯರು, ಆಮನಿ ಸೇರಿದಂತೆ ನೂರಾರು ನಾಟಕಗಳನ್ನು ಜಂಬೆ ನಿರ್ದೇಶಿಸಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ. ಯಕ್ಷಗಾನ ಮತ್ತು ಆಧುನಿಕ ರಂಗಭೂಮಿಯನ್ನು ಬೆಸೆಯುವಲ್ಲಿ ಅವರ ಕೊಡುಗೆ ಅಪಾರ.
ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ೧೧ಕ್ಕೆ ಸಾಗರ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಂತಿಮ ದರ್ಶನ: ಸ್ಥಳೀಯ ಶಾಸಕ ಗೋಪಾಲಕೃಷ್ಣ ಬೇಳೂರು ಹೆಗ್ಗೋಡು ಆಗಮಿಸಿ ಅಂತಿಮ ದರ್ಶನ ಮಾಡಿದರು. ರಂಗಕರ್ಮಿ ಕೆ. ಜಿ. ಕೃಷ್ಣಮೂರ್ತಿ, ಕೆ.ಜಿ. ಮಹಾಬಲೇಶ್ವರ, ಪುರುಷೋತ್ತಮ ತಲವಾಟ, ದೇವರು ಭಟ್, ಕೆ.ವಿ. ಅಕ್ಷರ, ವಿಮರ್ಶಕ ಟಿ.ಪಿ. ಅಶೋಕ್, ನಿವೃತ್ತ ಪ್ರಾಧ್ಯಾಪಕ ಜಸ್ವಂತ್ ಜಾಧವ್, ಪತ್ರಕರ್ತ ಶ್ರೀಧರ ಭಾಗವತ್ ಸೇರಿದಂತೆ ಬಂಧು ಬಳಗ, ಶಿಷ್ಯವೃಂದ ಜಂಬೆಯವರಿಗೆ ಅಂತಿಮ ನಮನ ಸಲ್ಲಿಸಿದರು. ಜಂಬೆ ನಿಧನಕ್ಕೆ ಇಡೀ ರಂಗಲೋಕ ಕಂಬನಿ ಮಿಡಿದಿದೆ.೧೨ಕೆ.ಎಸ್.ಎ.ಜಿ.೨ಚಿದಂಬರರಾವ್ ಜಂಬೆ.