ರಾಗಿ ಕಟಾವು ಯಂತ್ರಕ್ಕೆ ₹2700 ಬಾಡಿಗೆ ನಿಗದಿ: ಡೀಸಿ ಶುಭ ಕಲ್ಯಾಣ್

KannadaprabhaNewsNetwork |  
Published : Nov 06, 2024, 11:53 PM IST
ಬೆಳೆ ಕಟಾವು ಯಂತ್ರ ಬೆಲೆ ನಿಗಧಿ ಪೂರ್ವ ಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದು, ರಾಗಿ ಕಟಾವು ಮಾಡಲು ಯಂತ್ರಕ್ಕೆ ಪ್ರತಿ ಗಂಟೆಗೆ 2700 ರು. ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದು, ರಾಗಿ ಕಟಾವು ಮಾಡಲು ಯಂತ್ರಕ್ಕೆ ಪ್ರತಿ ಗಂಟೆಗೆ 2700 ರು. ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಬೆಳೆ ಕಟಾವು ಯಂತ್ರ ಬೆಲೆ ನಿಗಧಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಗಿ ಬೆಳೆ ಕಟಾವಿಗಾಗಿ ಹೆಚ್ಚು ಬಾಡಿಗೆ ದರ ತೆಗೆದುಕೊಳ್ಳುವ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆ 1.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ವಿವಿಧ ಭಾಗಗಳಲ್ಲಿ ರಾಗಿ ಬೆಳೆ ಕಟಾವು ಪ್ರಾರಂಭಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಟಾವು ಯಂತ್ರಗಳನ್ನು ತರುವ ಮಾಲೀಕರು ಬೆಳೆ ಕಟಾವಿಗೆ ಹೆಚ್ಚಿನ ಮೊತ್ತ ನಿಗಧಿ ಮಾಡಿರುವ ಬಗ್ಗೆ ರೈತರಿಂದ ದೂರು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ರೈತ ಮುಖಂಡರೊಂದಿಗೆ ಚರ್ಚಿಸಿ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗದಂತೆ ಬೆಳೆ ಕಟಾವಿಗೆ ನಿರ್ಧಿಷ್ಟ ಬೆಲೆಯನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದಿಂದ ಬೆಳೆ ಕಟಾವು ಯಂತ್ರಗಳ ಕಾರ್ಯಕ್ಷಮತೆ ಪರಿಶೀಲನೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗುವುದು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆಯಾ ತಹಸೀಲ್ದಾರ್, ಪೊಲೀಸ್ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನೊಳಗೊಂಡಂತೆ ಸಭೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿರುವ ಕಟಾವು ಯಂತ್ರಗಳ ಮಾಹಿತಿ ಪಡೆದು ಯಂತ್ರಗಳ ಕಾರ್ಯಕ್ಷಮತೆಯನ್ನು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು. ಜಿಲ್ಲಾಡಳಿತದಿಂದ ಬೆಳೆ ಕಟಾವು ಯಂತ್ರಗಳಿಗೆ ದರ ನಿಗಧಿಪಡಿಸಿರುವ ಬಗ್ಗೆ ಕರಪತ್ರಗಳ ಮೂಲಕ ಹೆಚ್ಚು ಪ್ರಚಾರ ಕೈಗೊಳ್ಳಬೇಕು. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ವತಿಯಿಂದ ಸಹಾಯವಾಣಿ ಸ್ಥಾಪಿಸುವಂತೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಈಗಾಗಲೇ 1201 ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಬಾಕಿ ಉಳಿದ 4025 ಕಾರ್ಮಿಕರಿಗೆ ತ್ವರಿತವಾಗಿ ಪಡಿತರ ಚೀಟಿ ವಿತರಣೆ ಮಾಡಬೇಕು ಎಂದು ತಿಳಿಸಿದರು. ಇ-ಶ್ರಮ್ ನೋಂದಾಯಿತ ಅರ್ಹ ಕಾರ್ಮಿಕರು ತಮ್ಮ ಹತ್ತಿರದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಲೋಗಾನಂದ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಂಗಸ್ವಾಮಿ, ಕೃಷಿ ಸಹಾಯಕ ನಿರ್ದೇಶಕರಾದ ಹುಲಿರಾಜ್ ಹಾಗೂ ಚಂದ್ರಕುಮಾರ್ ಹಾಜರಿದ್ದರು.

ಆದ್ಯತಾ ಪಡಿತರ ಚೀಟಿ ವಿತರಿಸಿ: ಈ ಸಭೆಗೂ ಮುನ್ನ ನಡೆದ ಮತ್ತೊಂದು ಸಭೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲೆಯ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಶೀಘ್ರವಾಗಿ ಆದ್ಯತಾ ಪಡಿತರ ಚೀಟಿ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ