ಬಳ್ಳಾರಿ: ಜಿಲ್ಲೆಯಲ್ಲಿ ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ₹2,300 ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಲಾಗಿದ್ದು, ಹೆಚ್ಚಿನ ದರ ಪಡೆಯಲು ಮುಂದಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲಿ ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ ₹2500ದಿಂದ ₹3000ವರೆಗೆ ಬಾಡಿಗೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿ ಬಂದಿರುತ್ತವೆ.
ಈಗಾಗಲೇ ರೈತ ಮುಖಂಡರು ಮತ್ತು ಭತ್ತ ಕಟಾವು ಯಂತ್ರದ ಮಾಲೀಕರೊಂದಿಗೆ ಸಭೆ ನಡೆಸಿದ್ದು, ಅಂದಾಜು ₹2300ಗೆ ದರ ನಿಗದಿಪಡಿಸಿ ಕೊಡಲು ಕೋರಿರುತ್ತಾರೆ.ಹಾಗಾಗಿ ಜಿಲ್ಲೆಯಲ್ಲಿರುವ ಭತ್ತ ಕಟಾವು ಯಂತ್ರದ ಮಾಲೀಕರು ₹2300 ದರಕ್ಕೆ ಮೀರದಂತೆ ಭತ್ತ ಕಟಾವು ಮಾಡಬೇಕು. ತಪ್ಪಿದ್ದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.