ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಬಿಜೆಪಿ ಮುಖಂಡರಾದ ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ, ಬಿಜೆಪಿಯಿಂದ ಎಲ್ಲಾ ಅವಕಾಶ, ಅಧಿಕಾರವನ್ನು ಪಡೆದಿರುವ ರೇಣುಕಾಚಾರ್ಯ ಪಕ್ಷದ್ರೋಹಿ ಕೆಲಸ ಮಾಡಿದ್ದು, ತಕ್ಷಣವೇ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಬೇಕು ಎಂದರು.
ನ್ಯಾಮತಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಜಿ.ವಿಶ್ವನಾಥರನ್ನು ಬಹಿರಂಗವಾಗಿ ಬೆಂಬಲಿಸಿದ ರೇಣುಕಾಚಾರ್ಯರನ್ನು ನಮ್ಮ ಪಕ್ಷದಿಂದ ತೆಗೆದು ಹಾಕಬೇಕು. ಸೆ.14ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಗೋವಿನಕೋವಿಯ ಆರ್.ಪ್ರವೀಣರನ್ನು ಬಿಟ್ಟು, ಇದೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ ಜಿಪಂ ಮಾಜಿ ಸದಸ್ಯರೂ ಆದ ಡಿ.ಜಿ.ವಿಶ್ವನಾಥರನ್ನು ರೇಣುಕಾಚಾರ್ಯ ಬೆಂಬಲಿಸಿದ್ದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ದೂರಿದರು.ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸುವ ಹುನ್ನಾರವನ್ನು ರೇಣುಕಾಚಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಹೋಗುವ ತಯಾರಿ ನಡೆಸಿದ್ದಾರೆ. ಈಗಾಗಲೇ ರಾಜ್ಯ ಘಟಕದ ಗಮನಕ್ಕೆ ಈ ವಿಚಾರ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ರಾಷ್ಟ್ರೀಯ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿ, ವರಿಷ್ಟರ ಗಮನಕ್ಕೂ ಈ ವಿಚಾರ ತರಲಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗಿದ್ದುಕೊಂಡೇ ರೇಣುಕಾಚಾರ್ಯ ತಮ್ಮ ಲಗಾನ್ ಟೀಂ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ಪೂರಕವಾಗಿ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ತಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಸಹಕಾರ ನೀಡಿದ್ದರಿಂದಲೇ ಕಾಂಗ್ರೆಸ್ ಗೆದ್ದಿದ್ದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಮುಖಂಡರಾದ ಕೆ.ವಿ.ಚನ್ನಪ್ಪ, ಸಿ.ಕೆ.ರವಿ, ಮಂಜಣ್ಣ, ಆರ್.ಪ್ರವೀಣ, ನೆಲಹೊನ್ನೆ ದೇವರಾಜ, ಸೋಗಿಲು ಪ್ರಭು, ಅಜಯ ರೆಡ್ಡಿ, ರಾಜಣ್ಣ, ಸಿದ್ದೇಶ ಇತರರು ಇದ್ದರು.