ನೋಡುಗರ ಮೈನವಿರೇಳಿಸಿದ ರೇಣುಕಾ ಯಲ್ಲಮ್ಮದೇವಿ ಒನಕೆ ಕರಗ ಮಹೋತ್ಸವ

KannadaprabhaNewsNetwork |  
Published : May 15, 2025, 01:45 AM IST
೧೪ಕೆಎಲ್‌ಆರ್-೧೨-೧ಕೋಲಾರದ ಪಿ.ಸಿ.ಬಡಾವಣೆಯ ರೇಣುಕಾಂಭ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಕರಗ ಮಹೋತ್ಸವದಲ್ಲಿ ಜನಮನ ಸೆಳೆದ ವಸಂತೋತ್ಸವದ ೭ ಕಳಸಗಳನ್ನು ಹೊತ್ತು ಕರಗದ ಪೂಜಾರಿ ಮಂಜುನಾಥ್ ಮಾಡಿದ ನೃತ್ಯ ಮನಸೂರೆಗೊಂಡಿತು. | Kannada Prabha

ಸಾರಾಂಶ

ಸುಮಾರು ೫ ಅಡಿ ಉದ್ದದ ಒನಕೆ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯನ್ನಿಟ್ಟು ಒನಕೆಯನ್ನು ತಲೆಯ ಮೇಲಿಟ್ಟುಕೊಂಡು ಅದರಲ್ಲಿನ ವಸಂತದ ನೀರನ್ನು ನೃತ್ಯ ಪ್ರದರ್ಶನದ ಮೂಲಕ ಹೊರಚೆಲ್ಲುವ ಕರಗದ ಪೂಜಾರಿ ಮಂಜುನಾಥ್‌ರ ಕಲಾ ಪ್ರೌಢಿಮೆಯ ಸಾಹಸಕ್ಕೆ ಜನ ತಲೆದೂಗಿದರು.

ಕನ್ನಡಪ್ರಭ ವಾರ್ತೆ ಕೋಲಾರ

ನಗರದ ಪಿ.ಸಿ.ಬಡಾವಣೆಯ ರೇಣುಕಾಂಬೆ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಕರಗ ಮಹೋತ್ಸವದ ಸಮಾರೋಪದ ಅಂಗವಾಗಿ ಬುಧವಾರ ಸಂಜೆ ನಡೆದ ಒನಕೆ ಕರಗದ ನೃತ್ಯ ಜನಮನಸೂರೆಗೊಂಡಿದ್ದು, ರಸ್ತೆ ಇಕ್ಕೇಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಸಹಸ್ರಾರು ಮಂದಿ ಈ ಅದ್ಭುತ ನೃತ್ಯವನ್ನು ಕಣ್ತುಂಬಿಕೊಂಡರು.

ಸುಮಾರು ೫ ಅಡಿ ಉದ್ದದ ಒನಕೆ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯನ್ನಿಟ್ಟು ಒನಕೆಯನ್ನು ತಲೆಯ ಮೇಲಿಟ್ಟುಕೊಂಡು ಅದರಲ್ಲಿನ ವಸಂತದ ನೀರನ್ನು ನೃತ್ಯ ಪ್ರದರ್ಶನದ ಮೂಲಕ ಹೊರಚೆಲ್ಲುವ ಕರಗದ ಪೂಜಾರಿ ಮಂಜುನಾಥ್‌ರ ಕಲಾ ಪ್ರೌಢಿಮೆಯ ಸಾಹಸಕ್ಕೆ ಜನ ತಲೆದೂಗಿದರು.

ಒನಕೆಯನ್ನು ಕೈಯಿಂದ ಹಿಡಿಯದೇ ಒಂದು ತುದಿಯ ಮೇಲೆ ನೀರು ತುಂಬಿದ ಪಾತ್ರೆಯಿಟ್ಟು, ಮತ್ತೊಂದು ತುದಿಯನ್ನು ತಲೆ ಮೇಲಿಟ್ಟುಕೊಂಡು ನರ್ತಿಸುವ ಮೂಲಕ ಜನತೆ ನಿಬ್ಬೆರಗಾಗುವಂತೆ ಮಾಡಿದರು.

೩೩ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಒನಕೆ ಕರಗ ನೃತ್ಯಕ್ಕೂ ಮುನ್ನ ವಸಂತದ ನೀರು ತುಂಬಿದ ಏಳು ಕಳಸಗಳನ್ನು ಒಂದರ ಮೇಲೊಂದರಂತೆ ಜೋಡಿಸಿಕೊಂಡು ತಲೆಯ ಮೇಲಿಟ್ಟು ಮಾಡಿದ ನೃತ್ಯ ಮನಮೋಹಕವಾಗಿತ್ತು.

ಒನಕೆಯ ಮೇಲಿನ ತಾಮ್ರದ ಪಾತ್ರೆಯಲ್ಲಿರುವ ವಸಂತದ ನೀರು ನಮ್ಮ ಮೇಲೆ ಬಿದ್ದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ನಾಗರಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು, ಸುಮಾರು ೧ ಗಂಟೆಗೂ ಹೆಚ್ಚು ಕಾಲ ನಡೆದ ಒನಕೆ, ಕಳಸಗಳನ್ನೊತ್ತ ನೃತ್ಯ ಮನಮೋಹಕವಾಗಿದ್ದು, ಕರಗದ ಪೂಜಾರಿ ಮಂಜುನಾಥ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ದೇವಾಲಯದ ಮುಂಭಾಗದ ರಸ್ತೆಯಲ್ಲಿ ಒನಕೆ ಕರಗದ ಹಿನ್ನೆಲೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದು, ರಸ್ತೆಯ ಇಕ್ಕೇಲಗಳು, ಮನೆಗಳ ಮೇಲೆ ಸಾವಿರಾರು ಜನ ನಿಂತು ಕರಗ ವೀಕ್ಷಿಸಿದರು.

ಹೂವಿನ ಕರಗ ಮಹೋತ್ಸವದಲ್ಲಿ ಒನಕೆ ಕರಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು, ಕರಗ ಮಹೋತ್ಸವದ ಸಮಾರೋಪವಾಗಿಯೂ ವಸಂತೋತ್ಸವವೂ ಇದೇ ಆಗಿರುತ್ತದೆ.

ಒನಕೆ ಕರಗದಲ್ಲಿ ಅನ್ನದಾಸೋಹ:

ದೇವಾಲಯ ಸಮಿತಿ ಸದಸ್ಯ ಆರ್‍ಮುಗಂ ಪುತ್ರಿ ಲೀಲಾ ಕುಟುಂಬದವರು ಒನಕೆ ಕರಗ ನಡೆಯುವ ದಿನದಂದು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಎಲ್ಲಾ ಭಕ್ತರಿಗೆ ಪ್ರತಿ ವರ್ಷವೂ ಪ್ರಸಾದ ಉಣಬಡಿಸುವ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಈ ಬಾರಿಯೂ ಮುಂದುವರಿಸಿದರು.

ಕಾರ್ಯಕ್ರಮದಲ್ಲಿ ರೇಣುಕಾ ಯಲ್ಲಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್ ಕರಗ ಮಹೋತ್ಸವದ ನೇತೃತ್ವ ವಹಿಸಿದ್ದು, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಅರ್ಚಕರಾದ ಸುರೇಶಾಚಾರ್ಯ, ಮೇಸ್ತ್ರಿ ಕೆ.ಆರ್‍ಮುಗಂ, ಪತ್ರಕರ್ತ ದುನಿಯಾ ಮುನಿಯಪ್ಪ, ದೇವಾಲಯ ಸಮಿತಿ ಉಪಾಧ್ಯಕ್ಷ ಚಂದ್ರಪ್ರಕಾಶ್, ಖಜಾಂಚಿ ಕೆ.ಎಸ್.ಮಂಜುನಾಥ್, ಕಾರ್ಯದರ್ಶಿ ಕಲಾ ರಮೇಶ್, ಉಪ ಕಾರ್ಯದರ್ಶಿ ವಿ.ಸುರೇಶ್, ಟಿ.ಸಂಪತ್ ಕುಮಾರ್, ಎ.ಮಹೇಶ್, ಮೇಸ್ತ್ರಿ ಕೃಷ್ಣಪ್ಪ, ಗೋವಿಂದರಾಜು, ಸಿ.ಶ್ರೀನಿವಾಸ್, ವೆಂಕಟೇಶಪ್ಪ, ಮುತ್ತಪ್ಪ, ಗಣೇಶ್, ಎಲ್‌ಐಸಿ ಮುನಿಯಪ್ಪ, ನಾಗರಾಜ್, ಯಲ್ಲಪ್ಪ, ಸಂತೋಷ್, ಉಕ್ಕರಹಳ್ಳಿ ಶ್ರೀನಿವಾಸ್ ಇದ್ದರು.

PREV