ಕನ್ನಡಪ್ರಭ ವಾರ್ತೆ ಮಡಿಕೇರಿ ಬಿಜೆಪಿಯ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಖಚಿತತೆ ಬಗ್ಗೆ ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಭೋಸರಾಜ್ ಸ್ಪಷ್ಟೀಕರಣ ನೀಡಿದ್ದಾರೆ. ತಲಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅವರು, ರೇಣುಕಾಚಾರ್ಯ ಅಷ್ಟೇ ಅಲ್ಲ ಬೇರೆ ಬೇರೆಯವರೂ ಬಂದು ಭೇಟಿಯಾಗಿದ್ದಾರೆ. ಮುಂದೆ ಇನ್ನಷ್ಟು ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ. ಆದರೆ ಎಷ್ಟು ಜನ ಸೇರ್ಪಡೆಯಾಗುತ್ತಾರೆ ಅಂತ ಈಗ ಹೇಳಲ್ಲ ಎಂದರು. ಯಾರೆಲ್ಲ ಬರುತ್ತಾರೆ ಎಂದು ಹೇಳಲು ಮುಖ್ಯಮಂತ್ರಿ ಹಾಗೂ ನಮ್ಮ ಅಧ್ಯಕ್ಷರು ಇದ್ದಾರೆ. ನಾನು ಹಿಂದೆಯೇ ಸಾಕಷ್ಟು ಜನರು ಕಾಂಗ್ರೆಸ್ ಗೆ ಬರುತ್ತಾರೆ ಅಂತ ಹೇಳಿದ್ದೆ. ಜನರು ಕೂಡ ಯಾರು ಯಾರು ಏನು ಕೆಲಸ ಮಾಡುತ್ತಿದ್ದಾರೆ ಅಂತ ಜನ ನೋಡುತ್ತಿದ್ದಾರೆ ಎಂದು ತಿಳಿಸಿದರು. ಕೆ.ಎಸ್. ಭಗವಾನ್ ಹೇಳಿಕೆಗೆ ಸರ್ಕಾರದ ಕುಮ್ಮಕ್ಕು ಇದೆ ಎಂಬ ಆರಗ ಜ್ಞಾನೇಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದವರು. ಆಗಲೂ ಅವರು ತಪ್ಪು ಮಾಹಿತಿ ನೀಡಿ ಜನರ ಕ್ಷಮೆ ಯಾಚಿಸಿದ್ದವರು. ಆ ರೀತಿ ಯಾರು ಮಾತನಾಡಬಾರದು. ಆದರೆ ಕಾಂಗ್ರೆಸ್ ಯಾವತ್ತು ಕೂಡ ಜಾತಿ ಜಾತಿ ನಡುವೆ ವೈಷಮ್ಯ ಬೆಳೆಸಿಲ್ಲ. ಹಿಂದಿನಿಂದಲೂ ಕಾಂಗ್ರೆಸ್ ಎಲ್ಲಾ ಜಾತಿ ಧರ್ಮದವರನ್ನು ಒಂದೇ ರೀತಿ ಕಂಡಿದೆ. ಹೀಗಾಗಿ 130 ವರ್ಷದಿಂದ ಕಾಂಗ್ರೆಸ್ ಇದೆ. ಎಲ್ಲ ಜಾತಿ ಧರ್ಮದವರಿಗೆ ಗೌರವ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.