ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಮೈಸೂರು ಅರಮನೆ ಜಪದಕಟ್ಟೆ ಮಠಾಧ್ಯಕ್ಷ ಶ್ರೀ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ರೇಣುಕಾಚಾರ್ಯರ ಇತಿಹಾಸವನ್ನು ಜನರು ಅರಿಯಬೇಕು. ರೇಣುಕಾಚಾರ್ಯರ ಪ್ರಸ್ತುತಪಡಿಸಿದ ಮಾನವ ಧರ್ಮ ಆಚರಣೆಗಳಿಗೆ ಹರಪ್ಪ, ಮೊಹೆಂಜಾದಾರೋ ಕಾಲದಿಂದಲೂ ಸೈದ್ದಾಂತಿಕ ಉಲ್ಲೇಖವಿದೆ. ಶಾಸನಗಳು, ಸಂಶೋಧನಾ ಗ್ರಂಥಗಳು ಕಟ್ಟಿಕೊಟ್ಟಿರುವ ರೇಣುಕಾಚಾರ್ಯರ ಇತಿಹಾಸದ ಕುರಿತು ಜನರಿಗೆ ತಿಳಿಯಪಡಿಸಬೇಕು ಎಂದರು.
ರೇಣುಕಾಚಾರ್ಯರು ಯುಗಯುಗಗಳಲ್ಲೂ ಅವಿರ್ಭವಿಸಿ ಸಮಾಜೋದ್ಧಾರಕ್ಕೆ ಕಾರಣರಾಗಿದ್ದಾರೆ. ಅನುಭವ ಮಂಟಪದಲ್ಲಿದ್ದ ಅಕ್ಕಮಹಾದೇವಿ, ಯಡಿಯೂರು ಸಿದ್ದಲಿಂಗೇಶ್ವರರು ರೇಣುಕಾಚಾರ್ಯರ ತತ್ವಸಿದ್ದಾಂತಗಳಿಂದ ಪ್ರಭಾವಿತರಾಗಿದ್ದಾರೆ. ಗುರುವಿನ ಅಣತಿಯಂತೆ ನಡೆದು ಸಮಾಜದ ವಿಘಟನೆಗೆ ಅವಕಾಶ ನೀಡದೇ ಸಂಘಟನೆ ಮಾಡಬೇಕು. ಸದ್ಗುಣಿಗಳಾಗಬೇಕು ಎಂದು ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ತಿಳಿಸಿದರು.ಆರಾಧ್ಯ ಟ್ರಸ್ಟ್ ಅಧ್ಯಕ್ಷ ವಿಶ್ವಾರಾಧ್ಯ ಮಾತನಾಡಿ, ಪ್ರಪಂಚದ ಉದ್ದಾರಕ್ಕಾಗಿ ಅವತರಿಸಿದ ಜಗದ್ಗುರು ರೇಣುಕಾಚಾರ್ಯರು ಧರ್ಮ ಪ್ರಚಾರಕ್ಕಾಗಿ ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಕಾಲ್ನಡಿಗೆಯಲ್ಲಿ ಸಂಚರಿಸಿ ಜನರಿಗೆ ಶಾಂತಿ, ಸೌಹಾರ್ದ, ಸಹಬಾಳ್ವೆ ಜೀವನದ ಸನ್ಮಾರ್ಗದೆಡೆಗೆ ನಡೆಸಿದರು ಎಂದರು. ಈ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ನಗರಸಭೆ ಸದಸ್ಯರಾದ ಸಿ.ಎಂ.ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಪೂರಿಗಾಲಿ ಚೆನ್ನಬಸವ ಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮಿಜೀ, ಅಜ್ಜೀಪುರ ಪೀಠದ ಮಠಾಧ್ಯಕ್ಷ ನಂದಿಶಿವಾಚಾರ್ಯಸ್ವಾಮಿಜೀ, ಗುಂಡೇಗಾಲ ಪಾಳ್ಯದ ಶಿವಮೂರ್ತಿಚಾರ್ಯ ಸ್ವಾಮಿಜೀ, ಶಿವಪಂಚಾಕ್ಷರಿ ಸ್ವಾಮಿಜೀ, ವೀರಶೈವ ಮಹಾಸಭಾ ಅಧ್ಯಕ್ಷ ನಂದೀಶ್, ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಪದಾಧಿಕಾರಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿಮಂದಿರದಲ್ಲಿ ಬೆಳ್ಳಿರಥದಲ್ಲಿ ವಿವಿಧ ಕಲಾತಂಡಗಳೊಂದಿಗೆ ಆರಂಭವಾದ ಜಗದ್ಗುರು ಶ್ರೀ ರೇಣುಕಾಚಾರ್ಯ ಅವರ ಭಾವಚಿತ್ರ ಮೆರವಣಿಗೆಗೆ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಚಾಲನೆ ನೀಡಿದರು.