ರೇಣುಕಾಪುರ ಕ್ಯಾಂಪ್‌ ನೀರಿನ ಘಟಕ ರಿಪೇರಿ ಯಾವಾಗ?

KannadaprabhaNewsNetwork | Published : Dec 5, 2024 12:31 AM

ಸಾರಾಂಶ

ಮಲೇಬೆನ್ನೂರು ಸಮೀಪದ ಕುಣಿಬೆಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಣುಕಾಪುರ ಕ್ಯಾಂಪ್‌ನಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲಾಗಿದೆ. ಆದರೆ, ಈ ಘಟಕ ಕೆಟ್ಟು ವರ್ಷವೇ ಕಳೆದರೂ ದುರಸ್ತಿಪಡಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿಲ್ಲ. ಪರಿಣಾಮ ಸರ್ಕಾರದ ಮಹತ್ವದ ಯೋಜನೆ ಹಳ್ಳಹಿಡಿಯುತ್ತಿದೆ.

- ಒಂದು ವರ್ಷದಿಂದ ಸಣ್ಣ ರಿಪೇರಿಗೂ ಮುಂದಾಗದ ಏಜೆನ್ಸಿ ।

- ಶುದ್ಧ ಕುಡಿಯುವ ನೀರಿಗಾಗಿ ನಿಲ್ಲದ ಗ್ರಾಮಸ್ಥರ ಪರದಾಟ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಇಲ್ಲಿಗೆ ಸಮೀಪದ ಕುಣಿಬೆಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಣುಕಾಪುರ ಕ್ಯಾಂಪ್‌ನಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲಾಗಿದೆ. ಆದರೆ, ಈ ಘಟಕ ಕೆಟ್ಟು ವರ್ಷವೇ ಕಳೆದರೂ ದುರಸ್ತಿಪಡಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿಲ್ಲ. ಪರಿಣಾಮ ಸರ್ಕಾರದ ಮಹತ್ವದ ಯೋಜನೆ ಹಳ್ಳಹಿಡಿಯುತ್ತಿದೆ.

ರೇಣುಕಾಪುರ ಕ್ಯಾಂಪ್‌ನ ಈ ನೀರಿನ ಘಟಕ ನಿರ್ವಹಣೆಯಿಂದ ಸಂಪೂರ್ಣ ವಂಚಿತವಾಗಿದೆ. ಘಟಕದ ಒಳಗೆ ಧೂಳು, ತಂಬಾಕು ಪೊಟ್ಟಣಗಳೇ ತುಂಬಿವೆ ಘಟಕದ ರಕ್ಷಣೆಗಾಗಿ ಅಳವಡಿಸಿರುವ ಗ್ಲಾಸ್‌ಗಳು ಒಡೆದು ಹಾನಿಯಾಗಿದೆ, ಪೈಪ್‌ಗಳು ಒಡೆಯುವ ಹಂತ ತಲುಪಿವೆ. ಲಕ್ಷಾಂತರ ರು. ವೆಚ್ಚದ ನೀರು ಶುದ್ಧೀಕರಣ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಸುಮಾರು 600ಕಕ್ಊ ಅಧಿಕ ಜನರು ವಾಸಿಸುವ ಗ್ರಾಮದ ಜನರು ಘಟಕದ ಶುದ್ಧ ಕುಡಿಯುವ ನೀರು ಅಮೃತಕ್ಕೆ ಸಮಾನವೆಂದೇ ಭಾವಿಸಿದ್ದರು. ಶುದ್ಧ ಕುಡಿಯುವ ನೀರು ಬಳಸುತ್ತ ಸಾಂಕ್ರಾಮಿಕ ರೋಗಗಳು ಹಾಗೂ ಕಾಯಿಲೆಗಳಿಂದ ಮುಕ್ತರಾಗುತ್ತಿದ್ದರು. ಆದರೆ, ಈಗ ಶುದ್ಧ ನೀರು ದೊರಕದೇ ಪ್ರಾಣಭೀತಿ ಅನುಭವಿಸುತ್ತಿದ್ದಾರೆ. ಘಟಕದಲ್ಲಿ ಶುದ್ಧ ನೀರು ಪೂರೈಕೆಯಾಗದೇ, ಸಮೀಪದ ಬೋರ್‌ವೆಲ್‌ ನೀರನ್ನೇ ಬಳಸುತ್ತಿದ್ದಾರೆ. ಬೋರ್‌ ನೀರು ಎಂದರೆ ಅದು ಫ್ಲೋರೈಡ್‌ಯುಕ್ತ ನೀರು, ಕಾಯಿಲೆಗಳ ತರಿಸುವಂಥದು. ಆದರೆ, ಬೋರ್‌ ನೀರು ಬಳಸದೇ ಇಲ್ಲಿನ ಜನರಿಗೆ ಬೇರೆ ಮಾರ್ಗವೇ ಇಲ್ಲ. ಸಣ್ಣ ರಿಪೇರಿ ಮಾಡಿಸಿದರೆ ಘಟಕ ಪುನಾರಂಭ ಆಗಬಲ್ಲದು. ಆದರೆ, ಆ ಜನಪರ ಕಾಳಜಿ ಯಾರಲ್ಲೂ ಕಾಣುತ್ತಿಲ್ಲ.

ಗ್ರಾಮಸ್ಥ ಮಂಜಪ್ಪ ಹೇಳುವಂತೆ, ಈ ಘಟಕ ನಿರ್ವಹಣೆ ಖಾಸಗಿ ಏಜೆನ್ಸಿಗೆ ನೀಡಲಾಗಿದೆ. ಕೇವಲ ಒಂದೂವರೆ ಸಾವಿರ ರು. ವೆಚ್ಚದ ವಸ್ತು ಅಳವಡಿಸಿ, ರಿಪೇರಿ ಮುಗಿಸಲು ವರ್ಷದಿಂದಲೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ನಮ್ಮ ಕ್ಯಾಂಪ್ ಜನರ ದೌರ್ಭಾಗ್ಯವೇ ಸರಿ. ಈ ಘಟಕದಿಂದ ನೀರು ಹಿಡಿದು ಕುಡಿಯುತ್ತಿದ್ದಾಗ ಕಾಲು ನೋವು ಬರುತ್ತಿರಲಿಲ್ಲ. ಈಗ ನೀರು ಬಂದ್ ಆಗಿದೆ. ಮೊಣಕಾಲು ನೋವಾಗಿ ಡಾಕ್ಟರ್‌ಗೆ ₹೧೦ ಸಾವಿರ ಖರ್ಚು ಮಾಡಿದ್ದೇನೆ ಎಂದು ಎಂದು ನಿವಾಸಿ ದೂರುತ್ತಾರೆ. ಈ ನೀರಿನ ಘಟಕ ರಿಪೇರಿ ಆಗುವವರೆಗೂ ಪಕ್ಕದ ಬೋರ್‌ನಿಂದ, ಕೆಲವರು ಕುಣಿಬೆಳಕೆರೆಗೆ ತೆರಳಿ ಕುಡಿಯುವ ನೀರು ತರುವಂತಾಗಿದೆ ಎಂದು ಗ್ರಾಮದ ಲಕ್ಷ್ಮೀ, ಸಿದ್ದಪ್ಪ ಹಾಗೂ ವಿಜಯ್ ಇಲ್ಲಿನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

- - -

ಕೋಟ್ಸ್‌ ಎರಡು ವರ್ಷಗಳ ಹಿಂದಷ್ಟೇ ರೇಣುಕಾಪುರ ಕ್ಯಾಂಪ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು. ಬೆಳಗಾವಿ ಮೂಲದ ಮಲ್ಲಿಕಾರ್ಜುನ ಸ್ವಾಮಿ ಎಂಬಾತ ಘಟಕದ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದ್ದರು. ಮೊದಲು ₹2 ಕಾಯಿನ್ ಹಾಕಿ, ಕುಡಿಯುವನೀರು ಪಡೆಯುತ್ತಿದ್ದರು. ಆದರೆ, ಘಟಕ ನಿರ್ವಹಣೆ ದುಬಾರಿಯಾಗುತ್ತದೆ ಎಂಬ ಕಾರಣಕ್ಕೆ ₹5 ಕಾಯಿನ್‌ ಬಳಸುವ ವ್ಯವಸ್ಥೆ ಜಾರಿ ಮಾಡಿದ್ದರಿಂದ ಗ್ರಾಮದ ಕೆಲವರು ವಿರೋಧಿಸಿದರು. ಇದರಿಂದಾಗಿ ನೀರನ ಘಟಕ ದುರಸ್ತಿಯಾಗಿಲ್ಲ

- ತಿಪ್ಪೇಸ್ವಾಮಿ, ಪಿಡಿಒ, ಕುಣಿಬೆಳಕೆರೆ ಗ್ರಾಪಂ

ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ, ನಿರ್ಲಕ್ಷ್ಯದ ಕುರಿತು ಗ್ರಾಪಂ.ನ 3 ಸಭೆಗಳಲ್ಲಿ ಚರ್ಚಿಸಿದ್ದೇವೆ. ನೀರನ ಘಟಕ ನಿರ್ವಹಣೆ ಮಾಡುವ ಏಜೆನ್ಸಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್‌ಗೆ ಪತ್ರ ಮುಖೇನ ಮಾಹಿತಿ ತಿಳಿಸಲಾಗಿದೆ. ಏಜೆನ್ಸಿಯವರೇ ಘಟಕದ ವಿದ್ಯುತ್ ಶುಲ್ಕ ಭರಿಸಬೇಕಿದೆ. ಸದರಿ ಏಜೆನ್ಸಿಯವರ ನಿರ್ಲಕ್ಷ್ಯ ಗಂಭೀರವಾಗಿ ಪರಿಗಣಿಸಿದ ಇಲಾಖೆ, ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಗ್ರಾಪಂಗೆ ಪತ್ರ ಬರೆದಿದೆ

- ನಾಗರಾಜ್, ಅಧ್ಯಕ್ಷ, ಗ್ರಾಪಂ

- - - -೪ಎಂಬಿಆರ್೧: ದುರಸ್ತಿ ವಂಚಿತ ರೇಣುಕಾಪುರ ಕ್ಯಾಂಪ್ ಶುದ್ಧ ನೀರು ಘಟಕ.

-೪ಎಂಬಿಆರ್೨: ರೇಣುಕಾಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಗಾಜುಗಳು ಹಾನಿಗೊಂಡಿರುವುದು.

Share this article