ಬೆಂಗಳೂರು‘ : ಪೊಲೀಸ್ ವ್ಯವಸ್ಥೆ, ಮಾಧ್ಯಮಗಳು ಅವರವರ ಕೆಲಸ ಸರಿಯಾಗಿ ಮಾಡುತ್ತಿದ್ದಾರೆ ಎಂದಾಗ ಇಲ್ಲಿ ಕಲಾವಿದರು ಅನ್ನುವುದು ಬರಲ್ಲ. ನಾನು ಒಬ್ಬರ ಪರ, ವಿರೋಧ ಮಾತನಾಡುವುದು ಬೇಕಾಗಿಲ್ಲ. ಎಲ್ಲೋ ಓಡಾಡಿಕೊಂಡು ಇದ್ದು ಇಲ್ಲಿ ಬೀದಿಯಲ್ಲಿ ಬಿದ್ದಿದ್ದ ರೇಣುಕಾಸ್ವಾಮಿ, ಅವರ ಕುಟುಂಬ, ಅವರ ಹುಟ್ಟೋ ಮಗು ಎಲ್ಲರಿಗೂ ನ್ಯಾಯ ಸಿಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಅವರಿಗೆ ನ್ಯಾಯ ಸಿಕ್ಕಾಗ ನಮ್ಮ ಚಿತ್ರರಂಗಕ್ಕೂ ನ್ಯಾಯ ಸಿಗುತ್ತದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಕಿಚ್ಚ ಸುದೀಪ್, ‘ಎಲ್ಲರೂ ಫಿಲ್ಮ್ ಚೇಂಬರ್‌ಗೆ ಹೋಗಿ ಬ್ಯಾನ್ ಮಾಡುತ್ತೀರೋ ಅಂತ ಕೇಳಿದರೆ ಅಲ್ಲಿನ ಹಿರಿಯರಾದರೂ ಏನು ಹೇಳುತ್ತಾರೆ.
ಇಲ್ಲಿ ಬ್ಯಾನ್ ಅನ್ನುವ ಪದ ಸೂಕ್ತ ಇಲ್ಲ. ನ್ಯಾಯ ಸಿಗಲಿ. ಕೇಸಿಂದ ಹೊರಗಡೆ ಬಂದರೆ ಬ್ಯಾನ್ ಎಂಬುದು ಮುನ್ನೆಲೆಗೆ ಬರಲ್ಲ. ಹಾಗಾಗಿ ನೋವು ಅನುಭವಿಸುತ್ತಿರುವ ಕುಟುಂಬಕ್ಕೆ ನ್ಯಾಯ ಸಿಗಲಿ. ಅದು ಎಲ್ಲರಿಗೂ ಪಾಠವಾಗಲಿ’ ಎಂದು ಹೇಳಿದರು.ಈ ಪ್ರಕರಣದಲ್ಲಿ ಚಿತ್ರರಂಗ ಏನು ನಿಲುವು ತಗೋಬೇಕು ಎಂಬುದರ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಅವರು, ‘ಯಾರೋ ಒಬ್ಬರು ಬರುತ್ತಾರೆ.
ಒಬ್ಬ ವ್ಯಕ್ತಿ ಬಳಿ ಇನ್ನೊಬ್ಬರು ಹೊಡೆಯುತ್ತಿದ್ದಾರೆ ಅಂತ ದೂರು ಹೇಳುತ್ತಾರೆ. ಆ ವ್ಯಕ್ತಿ ಇನ್ನೊಬ್ಬರ ವಿರುದ್ಧ ಮಾತು ಆಡುತ್ತಾರೆ. ಸ್ವಲ್ಪ ಸಮಯದ ಬಳಿಕ ದೂರು ಹೇಳಿದವರು, ದೂರು ಹೇಳಿಸಿಕೊಂಡವರು ಒಂದಾಗಿರುತ್ತಾರೆ. ಇದೊಂದು ಪಾಠ. ಹಾಗಾಗಿ ಟಿವಿ ನೋಡಬೇಕು. ಅಲ್ಲಿ ಏನೇನು ಹೇಳುತ್ತಾರೆ ಅದನ್ನೆಲ್ಲಾ ಮಾಡಬಾರದು ಎಂಬ ಪಾಠ ಕಲಿಯಬೇಕು’ ಎಂದು ಹೇಳಿದರು.
‘ಫ್ರೆಂಡ್‌ಶಿಪ್ ಬೇರೆ, ಜಸ್ಟಿಸ್ ಬೇರೆ, ರಿಲೇಶಿನ್‌ಶಿಪ್ ಬೇರೆ. ನಾನು ಇದುವರೆಗೆ ಯಾರ ಬಗ್ಗೆಯೂ ಮಾತನಾಡಿದವನಲ್ಲ. ಚಿತ್ರರಂಗ ಕಟ್ಟಲು ಬಹಳ ಮಂದಿ ಶ್ರಮಿಸಿದ್ದಾರೆ. ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಬರುವುದು ನನಗೆ ಇಷ್ಟವಿಲ್ಲ. ಚಿತ್ರರಂಗಕ್ಕೆ ಕ್ಲೀನ್ ಚಿಟ್ ಸಿಗಬೇಕು. ಜಡ್ಜ್ ನಿರ್ಧಾರ ಮಾಡಿ, ಸರಿಯಾದ ಅಪರಾಧಿ ಸಿಕ್ಕಾಗ ಚಿತ್ರರಂಗ ಕೂಡ ಖುಷಿ ಪಡುತ್ತದೆ. ಒಟ್ಟಾರೆ ಆ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಹೇಳಿದರು.‘ಸೆಲೆಬ್ರಿಟಿಗಳು ಅಂದ್ರೆ ದೇವರಲ್ಲ’
ಸೆಲೆಬ್ರಿಟಿಗಳು ಏನು ಕಿವಿಮಾತು ಹೇಳಬಹುದು ಎಂಬ ಪ್ರಶ್ನೆ ಎದುರಾದಾಗ ಕಿಚ್ಚ ಸುದೀಪ್, ‘ನಾನು ಯಾರಿಗೂ ಹೇಳುವಷ್ಟು ದೊಡ್ಡವನಲ್ಲ. ಸೆಲೆಬ್ರಿಟಿ ಅಂದ್ರೆ ದೇವರಲ್ಲ. ದೇವರ ಥರ ಟ್ರೀಟ್ ಮಾಡಬೇಡಿ, ಹಾಗೆ ಅಂದುಕೊಳ್ಳಬೇಡಿ. ಸರಿಯಾಗಿಯೇ ಮಾಡಬೇಕು ಅಂತ ಒತ್ತಡ ಕೂಡ ಹಾಕಬೇಡಿ ದಯವಿಟ್ಟು. ನಾನೇ ಏನಾದರೊಂದು ತಪ್ಪು ಮಾಡಿ ಮನೆಯಲ್ಲಿ ಬೈಸಿಕೊಳ್ಳುತ್ತಿರುತ್ತೇನೆ. ತಪ್ಪು ಮಾಡುವವನು ಮನುಷ್ಯ, ಫ್ಲಾಪ್ ಕೊಡುವವನು ಹೀರೋ. ಕಲಿಯೋಣ, ಮುಂದೆ ಹೋಗೋಣ. ನಾನು ಕಲಿಸೋಕೆ ಅಲ್ಲ ಇಲ್ಲಿಗೆ ಬಂದಿರೋದು, ಕಲಿಯೋಕೆ ಬಂದಿರೋದು’ ಎಂದು ಹೇಳಿದರು.