ಹುಬ್ಬಳ್ಳಿ: ಪುನರಾವರ್ತನೆ ಜ್ಞಾಪಕ ಶಕ್ತಿ ಹೆಚ್ಚಿಸುವ ಪ್ರಬಲ ಆಯುಧ. ಪುನಃ ಪುನಃ ಓದುವುದು ಹಾಗೂ ಬರೆಯುವುದರಿಂದ ಸ್ಮರಣಶಕ್ತಿ ಹೆಚ್ಚುವುದು ಎಂದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್ ಅಭಿಪ್ರಾಯ ಪಟ್ಟರು.
ತಾಲೂಕಿನ ಭೈರಿದೇವರಕೊಪ್ಪದ ಜ. ಶಿವಾನಂದ ಪ್ರೌಢಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ "ಪರೀಕ್ಷಾಪೂರ್ವ ಸಿದ್ಧತೆ ಹೇಗೆ? " ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಆಳವಾದ ಅಧ್ಯಯನ ಮುಖ್ಯ. ಪರೀಕ್ಷೆಗಳು ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯುವ ಅಳತೆಗೋಲು. ಓದುವುದು ಎಷ್ಟು ಮುಖ್ಯವೋ ಬರವಣಿಗೆಯೂ ಅಷ್ಟೇ ಮುಖ್ಯ. ಶ್ರದ್ಧೆ ಹಾಗೂ ಆತ್ಮ ವಿಶ್ವಾಸಗಳಿದ್ದರೆ ಜೀವನದಲ್ಲಿ ಯಾವುಗೇ ಮಹತ್ಕಾರ್ಯವನ್ನಾದರೂ ಸಾಧಿಸಬಹುದು. ಸಮಯ ಪರಿಪಾಲನೆಯೊಂದಿಗೆ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ವಿದ್ಯಾರ್ಜನೆ ಒಂದು ತಪಸ್ಸು ಇದ್ದಂತೆ. ಕೀಳರಿಮೆ ಬಿಟ್ಟು ಹೆಚ್ಚು ಅಂಕ ಗಳಿಸುವ ಸಾಮರ್ಥ್ಯ ನನ್ನಲ್ಲಿದೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಬರಬೇಕು. ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಲು ಕಿವಿಮಾತು ಹೇಳಿದರು.ಅತಿಥಿಗಳಾಗಿ ಆಗಮಿಸಿದ್ದ ಉಪನ್ಯಾಸಕ ಪ್ರೊ. ನಾಗರಾಜ ಶಿರೂರ, ಮುಖ್ಯಾಧ್ಯಾಪಕ ಪಿ.ಎನ್. ಬಾಳಪ್ಪಗೌಡ್ರ, ಶಿಕ್ಷಣ ಸಂಯೋಜಕ ಆರ್.ಬಿ. ಪಾಟೀಲ, ವೈ.ಡಿ. ಮದ್ದಿಯವರ ಮಾತನಾಡಿದರು. ಜ. ಶಿವಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಆರ್.ಬಿ. ಗುಂಡೂರ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ವಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಹಾವೇರಿ, ಜೆ.ಎ. ಕಾಂಬಳೆ, ಎಸ್.ಬಿ. ಬೆಲ್ಲದ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಎಸ್.ಎಸ್. ಗೋವಿಂದರಡ್ಡಿ ಸ್ವಾಗತಿಸಿದರು. ಜಿ.ಜಿ. ಪಾಟೀಲ ನಿರೂಪಿಸಿದರು. ರಾಯನಗೌಡ ಪಾಟೀಲ ವಂದಿಸಿದರು.