ಕನ್ನಡಪ್ರಭ ವಾರ್ತೆ ಬೆಂಗಳೂರು
ಹೌದು...ಜೀವಂತ ಆನೆಗಳಿಗೆ ಪ್ರತಿರೂಪದಂತೆ ಕಾಡಿನ ಕಳೆಗಿಡವಾದ ಲಾಂಟಾನದಿಂದ ಸಿದ್ಧಪಡಿಸಲಾದ ಬರೋಬ್ಬರಿ 60 ಆನೆಗಳು ನೋಡುಗರಲ್ಲಿ ಅಚ್ಚರಿಯನ್ನೇ ಮೂಡಿಸುತ್ತವೆ. ನೀಲಗಿರಿ ಬಯೋಸ್ಪೀಯರ್ ರಿಸರ್ವ್ ಪ್ರದೇಶ, ಮಲೈಮಹದೇಶ್ವರಬೆಟ್ಟ ಸೇರಿದಂತೆ ಇತರ ಕಡೆಗಳಲ್ಲಿ ವಾಸವಿರುವ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು, ಪನಯಾ ಮತ್ತು ಇತರೆ ಬುಡಕಟ್ಟು ಜನಾಂಗದ ಪರಿಣಿತರು ಜೀವಂತ ಆನೆಗಳ ಪ್ರತಿರೂಪಗಳನ್ನೇ ಸಿದ್ಧಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಮನುಷ್ಯ- ಪ್ರಾಣಿಗಳ ನಡುವಿನ ಸಹಬಾಳ್ವೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ 60 ಆನೆಗಳ ಪ್ರತಿರೂಪಗಳನ್ನು ಲಾಲ್‌ಬಾಗ್‌ನ ಗಾಜಿನಮನೆ, ಜೆಡಿ ಕಚೇರಿ ಸಮೀಪ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಹುಲ್ಲುಹಾಸು ಪ್ರದೇಶದಲ್ಲಿ ಇಟ್ಟಿದ್ದು ಫೆ.3ರಿಂದ ಮಾರ್ಚ್ 3ರವರೆಗೆ ಒಂದು ತಿಂಗಳ ಕಾಲ ಪ್ರದರ್ಶಿಸಲಾಗುತ್ತಿದೆ.‘ದಿ ರಿಯಲ್ ಎಲಿಫೆಂಟ್ ಕಲೆಕ್ಟೀವ್’ ಸಂಸ್ಥೆ ಈ ಪ್ರದರ್ಶನ ಆಯೋಜಿಸಿದ್ದು, ಫೆ.3ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಾಜೀವ್ ಗೌಡ, ತೋಟಗಾರಿಕೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಸುಭಾಷ್ ಮಾಳಖೇಡೆ ಉಪಸ್ಥಿತರಿರುವರು.