ಶಿವಮೊಗ್ಗ: ಜಿಲ್ಲೆಯಲ್ಲಿ ಎಷ್ಟು ಸಫಾಯಿ ಕರ್ಮಚಾರಿಗಳು ಇದ್ದಾರೆ. ಅವರಿಗೆ ಯಾವೆಲ್ಲ ಸೌಲಭ್ಯ ನೀಡಲಾಗಿದೆ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ 22 ಜನ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಲಾಗಿದೆ. ಆದರೆ ಕ್ಷೇತ್ರ ಭೇಟಿ ಮಾಡಿದಾಗ ಇವರಲ್ಲಿ ಅನೇಕರಿಗೆ ಮನೆ, ಸಾಲ ಇತರೆ ಸೌಲಭ್ಯಗಳು ಸರಿಯಾಗಿ ಸಿಗದೇ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಇನ್ನು ಎರಡು ದಿನಗಳ ಒಳಗೆ ಗುರುತಿಸಲಾದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಸಫಾಯಿ ಕರ್ಮಚಾರಿಗಳು ಎಂದು ಗುರುತಿಸಿದ 9 ತಿಂಗಳ ಒಳಗೆ ಅವರಿಗೆ ಪುನರ್ವಸತಿ ಸೌಲಭ್ಯಗಳಾದ ವಸತಿ, ಸಾಲ, ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಕೌಶಲ್ಯಾಭಿವೃದ್ಧಿ ತರಬೇತಿ, ಕಾನೂನಿನ ಸಲಹೆ ಅವಶ್ಯಕತೆ ಇದ್ದಲ್ಲಿ ಅದನ್ನು ನೀಡಬೇಕು. ಆದರೆ, ಜಿಲ್ಲೆಯಲ್ಲಿ ಈ ಎಲ್ಲ ಸೌಲಭ್ಯ ನೀಡಿರುವ ಕುರಿತು ಸಮರ್ಪಕವಾದ ವರದಿ, ಮಾಹಿತಿ, ಅಂಕಿ ಅಂಶಗಳನ್ನು ನೀಡಿಲ್ಲ. ನಿಖರವಾಗಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.ಗುರುತಿಸಲಾದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು 2 ರಿಂದ 5 ಲಕ್ಷ ರು. ಸಾಲ, ವಿವಿಧ ವಸತಿ ಯೋಜನೆಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶವಿದೆ. ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ನೀಡಲಾದ ಸಾಲದ ಮೊತ್ತ ದುರುಪಯೋಗವಾಗಬಾರದು. ಕ್ಷೇತ್ರ ಭೇಟಿ ವೇಳೆ ಸಾಲ ಸದ್ಬಳಕೆ ಕುರಿತು ಸರಿಯಾದ ಮಾಹಿತಿ ಒದಗಲಿಲ್ಲ. ಸಾಲ ಸದುಪಯೋಗ ಆಗಬೇಕು. ಇದರ ಸದ್ಬಳಕೆ ಕುರಿತು ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಬೇಕು ಎಂದರು.
ಏಜೆನ್ಸಿಗಳು ಪೌರಕಾರ್ಮಿಕರಿಗೆ ಅಗತ್ಯವಾದ ಸಮವಸ್ತ್ರ, ಗಮ್ ಬೂಟ್, ಕೈಗವಸು, ಮಾಸ್ಕ್ ಮತ್ತು ಇತರೆ ಸುರಕ್ಷಣಾ ಪರಿಕರಗಳನ್ನು ಸಮರ್ಪಕವಾಗಿ ನೀಡಬೇಕು. ವಾರ್ಡ್ ನಂ 21 ಸೇರಿದಂತೆ ಕೆಲವೆಡೆ ಇಂದು ಕ್ಷೇತ್ರಭೇಟಿ ಮಾಡಿದಾಗ ಪೌರಕಾರ್ಮಿಕರು ಸಮವಸ್ತ್ರ, ಗ್ಲೋವ್ಸ್ ಇತರೆ ಸುರಕ್ಷತಾ ಪರಿಕರ ಧರಿಸದೇ ಇರುವುದು ಕಂಡುಬಂತು. ಆದ್ದರಿಂದ ಆರೋಗ್ಯ ನಿರೀಕ್ಷಕರು ಮತ್ತು ಮೇಸ್ತ್ರಿಗಳು ಸುರಕ್ಷತಾ ಪರಿಕರಗಳನ್ನು ಧರಿಸುವಂತೆ ಪ್ರೇರೇಪಿಸಬೇಕು. ಏಜೆನ್ಸಿಗಳು ಮತ್ತು ಪೌರಸಂಸ್ಥೆಗಳು ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳು ಉಂಟಾಗಿ ಗಂಭೀರವಾಗಿ ಪರಿಣಿಮಿಸುತ್ತವೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಜಿ.ಪಂ ಉಪಕಾರ್ಯದರ್ಶಿ ಜಯಲಕ್ಷ್ಮಿ, ಆಯೋಗದ ಅಧಿಕಾರಿ ರಾಘವೇಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.
- ಗೋವಿಂದಪ್ಪ, ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷ.