ಭಾಷೆ, ಜಾತಿ ಮೀರಿದ ಭಂಡಾರ ಸಾಹಿತ್ಯ: ಬಾಚರಣಿಯಂಡ ಅಪ್ಪಣ್ಣ

KannadaprabhaNewsNetwork | Published : Nov 25, 2024 1:01 AM

ಸಾರಾಂಶ

ಭಾಷೆ ಮತ್ತು ಜಾತಿ ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾಷೆ ಮತ್ತು ಜಾತಿ ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ. ಇದನ್ನು ಓದುವ ಹವ್ಯಾಸದ ಮೂಲಕ ಬೆಳಗುವ ಕೆಲಸವಾಗಬೇಕು ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆಯ ದಾಖಲೆಯ 100ನೇ ಪುಸ್ತಕ ‘100ನೇ ಮೊಟ್ಟ್’ ಬಿಡುಗಡೆ ಸಮಾರಂಭವನ್ನು ಪತ್ರಿಕಾ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನ ಭಂಡಾರದಿಂದ ಕೂಡಿರುವ ಸಾಹಿತ್ಯ ಕ್ಷೇತ್ರ ಭಾಷೆ ಮತ್ತು ಜಾತಿಯನ್ನು ಮೀರಿ ಬೆಳೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಬರಹಗಾರರಿಗೆ ಪ್ರೋತ್ಸಾಹದ ಕೊರತೆ ಎದುರಾಗಿದೆ. ದಿಗ್ಗಜ ಸಾಹಿತಿಗಳ ನಡುವೆ ನಾವು ಬೆಳೆಯುವುದು ಕಷ್ಟ ಎನ್ನುವ ಆತಂಕ ಹೊಸ ಬರಹಗಾರರಿಂದ ದೂರವಾಗಬೇಕು. ಉತ್ತಮ ಸಾಹಿತ್ಯ ರಚನೆಯ ಮೂಲಕ ಮುಂದೆ ಬರಬೇಕು ಎಂದು ಬಾಚರಣಿಯಂಡ ಅಪ್ಪಣ್ಣ ಕರೆ ನೀಡಿದರು.

ಇಂದು ಸಾಹಿತ್ಯ ಕ್ಷೇತ್ರದಲ್ಲಿ ರಚನಾತ್ಮಕ ವಿಮರ್ಶೆಯ ಅಗತ್ಯವಿದೆ. ಬರಹಗಾರರಿಗೆ ಅರಿವಿಲ್ಲದೆಯೇ ಆಕ್ಷೇಪಾರ್ಹ ಅಂಶಗಳು ಸಾಹಿತ್ಯದಲ್ಲಿ ನುಸುಳುವ ಸಾಧ್ಯತೆಗಳಿವೆ. ಇದನ್ನು ತಿದ್ದಿ, ಸೂಕ್ತ ಸಲಹೆಗಳನ್ನು ನೀಡಿ ಹೊಸ ಬರಹಗಾರರನ್ನು ಹುರಿದುಂಬಿಸುವ ವಿಮರ್ಶಾಕಾರರು ಬಂದರೆ ಸಾಹಿತ್ಯ ಲೋಕ ಸಮೃದ್ಧಿಯಾಗಲಿದೆ. ಪುಸ್ತಕವನ್ನು ಕೊಂಡುಕೊಂಡವರು ತಕ್ಷಣ ಓದಲು ಆರಂಭಿಸಬೇಕು, ಓದದೆ ಪುಸ್ತಕವನ್ನು ಎಲ್ಲೋ ಇಟ್ಟು ತಾತ್ಸಾರ ಮನೋಭಾವನೆ ತೋರಿದರೆ ಸಾಹಿತ್ಯ ದ್ರೋಹ ಮಾಡಿದಂತ್ತಾಗುತ್ತದೆ ಎಂದರು.

‘100ನೇ ಮೊಟ್ಟ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಮಾಜ ಸೇವಕಿ ಮತ್ತು ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ, ಫೀ.ಮಾ.ಕೆ .ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಜನಿಸಿದ ಕೊಡಗು ಜಿಲ್ಲೆಯ ಬಗ್ಗೆ ವಿಶ್ವದೆಲ್ಲೆಡೆ ಹೆಮ್ಮೆ ಇದೆ. ಕೊಡಗಿನ ಶ್ರೇಷ್ಠ ವ್ಯಕ್ತಿಗಳು, ಪರಂಪರೆ, ಸಂಸ್ಕೃತಿ, ಆಚಾರ, ವಿಚಾರ ಇಡೀ ಪ್ರಪಂಚಕ್ಕೆ ಪರಿಚಯವಾಗಬೇಕಾದರೆ ಕನ್ನಡ, ಕೊಡವ ಭಾಷೆಯೊಂದಿಗೆ ಇಂಗ್ಲಿಷ್ ಭಾಷೆಯಲ್ಲೂ ಪುಸ್ತಕಗಳು ರಚನೆಯಾಗಬೇಕು ಎಂದು ಹೇಳಿದರು.

‘100ನೇ ಮೊಟ್ಟ್’ ಪುಸ್ತಕದ ಸಂಪಾದಕ ಹಾಗೂ ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರೀರ ಕರುಣ್ ಕಾಳಯ್ಯ ಮಾತನಾಡಿ, ‘100ನೇ ಮೊಟ್ಟ್’ ಕೊಡವ ಮಕ್ಕಡ ಕೂಟದ ಮಹತ್ವಾಕಾಂಕ್ಷೆಯ ಪುಸ್ತಕವಾಗಿದ್ದು, ಕೊಡವ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ 45ಕ್ಕೂ ಹೆಚ್ಚು ಲೇಖನಗಳಿವೆ. ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ದೇವನೆಲೆ, ಐನ್‌ಮನೆ, ಮಂದ್, ಪ್ರಕೃತಿ, ಕೊಡವ ಪದ್ಧತಿ ಸೇರಿದಂತೆ ಅನೇಕ ವಿಚಾರಗಳು ಒಳಗೊಂಡಿವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಎಲ್ಲ ಸಮಸ್ಯೆಗಳನ್ನು ಮೀರಿ ಕೊಡವ ಮಕ್ಕಡ ಕೂಟ ಸಂಘಟನೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದೆ. ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಇಂದು 100ನೇ ಪುಸ್ತಕವನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆಯೂ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದರು.

ಬರಹಗಾರ್ತಿ ತೆನ್ನೀರ ಟೀನಾ ಚಂಗಪ್ಪ ಮಾತನಾಡಿ ‘ಮನಸ್‌ರ ಮರೆಲ್’ ಪುಸ್ತಕದಲ್ಲಿ ನೈಜ ಘಟನೆಗಳಿಗೆ ಕಥೆಯ ರೂಪ ನೀಡಲಾಗಿದೆ. ಪುಸ್ತಕಗಳನ್ನು ಓದುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದರು.

‘ಕೊಡವಡ ನಮ್ಮೆನಾಳ್’ ಪುಸ್ತಕದ ಬರಹಗಾರ್ತಿ ರಶ್ಮಿ ಮೇದಪ್ಪ ಮಾತನಾಡಿ, ಹಬ್ಬ, ಸಂಪ್ರದಾಯಗಳು ಎನ್ನುವುದು ಒಂದು ಜನಾಂಗದ ಪ್ರತೀಕವಾಗಿದೆ. ಭಾಷೆ ಮತ್ತು ಸಂಸ್ಕೃತಿ ಒಂದು ಗಾಡಿಯ ಎರಡು ಚಕ್ರವಿದ್ದಂತೆ, ಒಂದಕ್ಕೆ ಹಾನಿಯಾದರೂ ಜನಾಂಗದ ಅಳಿವು ಖಚಿತ. ವಿಶ್ವ ಸಂಸ್ಥೆಯ ವರದಿಯಂತೆ ಅಳವಿನಂಚಿನಲ್ಲಿರುವ 197 ಭಾಷೆಗಳಲ್ಲಿ ಕೊಡವ ಭಾಷೆ ಕೂಡ ಇದೆ ಎನ್ನುವುದು ಆತಂಕಕಾರಿ ಎಂದು ಬೇಸರ ವ್ಯಕ್ತಪಡಿಸಿದರು.

‘ಮನಸ್‌ರ ಜರಿ’ಯ ಬರಹಗಾರ್ತಿ ಪೇರಿಯಂಡ ಯಶೋಧ ಹಾಗೂ ‘ಮನಸ್‌ರ ತಕ್ಕ್’ ಪುಸ್ತಕದ ಬರಹಗಾರ್ತಿ ಸೀಮಾ ಗಣಪತಿ ಮಾತನಾಡಿ, ಕೊಡವ ಮಕ್ಕಡ ಕೂಟದ ಸಾಧನೆ ಮತ್ತು ಬರಹಗಾರರಿಗೆ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದರು.

ತಮ್ಮದೇ ಅಧ್ಯಕ್ಷತೆಯಲ್ಲಿ ಕೊಡವ ಮಕ್ಕಡ ಕೂಟದ ಮೂಲಕ ದಾಖಲೆಯ 100 ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಬೊಳ್ಳಜಿರ ಬಿ.ಅಯ್ಯಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿದರು. ಉಡುವೇರ ರೇಖಾ ರಘು ಸ್ವಾಗತಿಸಿದರು. ಚೋಕಿರ ಅನಿತಾ ನಿರೂಪಿಸಿದರು. ಬೊಟ್ಟೋಳಂಡ ನಿವ್ಯ ದೇವಯ್ಯ ವಂದಿಸಿದರು.

ಚೀಯಕ್ ಪೂವಂಡ ಶ್ವೇತನ್ ಚಂಗಪ್ಪ, ಕುಳುವಂಡ ಶೃತಿ ಪೂಣಚ್ಚ, ಪಚ್ಚಾರಂಡ ನಿಶಾ ಸುಬ್ರಮಣಿ, ಬೊಪ್ಪಂಡ ಶ್ಯಾಮ್ ಪೂಣಚ್ಚ ಹಾಗೂ ಅಜ್ಜಮಕ್ಕಡ ವಿನು ಕುಶಾಲಪ್ಪ ವ್ಯಕ್ತಿ ಪರಿಚಯ ಮಾಡಿದರು.

4 ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ‘100ನೇ ಮೊಟ್ಟ್’ ಪುಸ್ತಕದೊಂದಿಗೆ ಕೊಡವ ಮಕ್ಕಡ ಕೂಟದ 101ನೇ ಪುಸ್ತಕ ಬರಹಗಾರ್ತಿ ತೆನ್ನೀರ ಟೀನಾ ಚಂಗಪ್ಪ ಬರೆದಿರುವ ‘ಮನಸ್‌ರ ಮರೆಲ್’, 102ನೇ ಪುಸ್ತಕ ಪೇರಿಯಂಡ ಯಶೋಧ ರಚಿಸಿರುವ ‘ಮನಸ್‌ರ ಜರಿ’, 103ನೇ ಕರವಂಡ ಸೀಮಾ ಗಣಪತಿ ಬರೆದಿರುವ ‘ಮನಸ್‌ರ ತಕ್ಕ್’ ಹಾಗೂ 104ನೇ ಪುಸ್ತಕವಾಗಿ ಐಚಂಡ ರಶ್ಮಿ ಮೇದಪ್ಪ ರಚಿಸಿರುವ ‘ಕೊಡವಡ ನಮ್ಮೆನಾಳ್’ (ನಾಟಕ ರೂಪತ್‌ಲ್) ಪುಸ್ತಕವನ್ನು ಕೂಡ ಬಿಡುಗಡೆ ಮಾಡಲಾಯಿತು.

Share this article