ನಿಗಮ ಮಂಡಳಿಯಲ್ಲಿ ದೇವರಹಿಪ್ಪಗಿಲ್ಲ ಪ್ರಾತಿನಿಧ್ಯ

KannadaprabhaNewsNetwork |  
Published : Nov 19, 2026, 03:00 AM IST
ಪ್ರಭುಲಿಂಗದಳ್ಳಿ | Kannada Prabha

ಸಾರಾಂಶ

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರಕ್ಕೆ ನಿಗಮ ಮಂಡಳಿ ನೇಮಕಾತಿಯಲ್ಲಿ ಒಂದೇ ಒಂದು ಸ್ಥಾನಮಾನ ದೊರೆಯದಿರುವುದು ಸ್ಥಳೀಯ ಕಾಂಗ್ರೆಸ್ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಧಿಕಾರದಲ್ಲಿರುವ ಪಕ್ಷಕ್ಕೆ ಕ್ಷೇತ್ರದಲ್ಲಿ ಮುಖಂಡರ ಕೊರತೆಯಿಲ್ಲ, ಆಕಾಂಕ್ಷಿಗಳಿಗೂ ಕೊರತೆಯಿಲ್ಲ. ಆದರೆ, ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಮಾತ್ರ ದೇವರಹಿಪ್ಪರಗಿ ಕ್ಷೇತ್ರಕ್ಕೆ ಪ್ರಾತಿನಿಧ್ಯವಿಲ್ಲ ಎಂಬುವುದೇ ಅಸಮಾಧಾನಕ್ಕೆ ಕಾರಣ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪಗಿ

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರಕ್ಕೆ ನಿಗಮ ಮಂಡಳಿ ನೇಮಕಾತಿಯಲ್ಲಿ ಒಂದೇ ಒಂದು ಸ್ಥಾನಮಾನ ದೊರೆಯದಿರುವುದು ಸ್ಥಳೀಯ ಕಾಂಗ್ರೆಸ್ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಧಿಕಾರದಲ್ಲಿರುವ ಪಕ್ಷಕ್ಕೆ ಕ್ಷೇತ್ರದಲ್ಲಿ ಮುಖಂಡರ ಕೊರತೆಯಿಲ್ಲ, ಆಕಾಂಕ್ಷಿಗಳಿಗೂ ಕೊರತೆಯಿಲ್ಲ. ಆದರೆ, ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಮಾತ್ರ ದೇವರಹಿಪ್ಪರಗಿ ಕ್ಷೇತ್ರಕ್ಕೆ ಪ್ರಾತಿನಿಧ್ಯವಿಲ್ಲ ಎಂಬುದೇ ಅಸಮಾಧಾನಕ್ಕೆ ಕಾರಣ.ರಾಜ್ಯ ಮುಖಂಡರು ದೇವರಹಿಪ್ಪಗಿ ಕ್ಷೇತ್ರದ ಮುಖಂಡರಿಗೂ ಅವಕಾಶ ಕಲ್ಪಿಸುವಲ್ಲಿ ಆಸಕ್ತಿ ತೋರಬೇಕಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಜಿಲ್ಲೆಯ ಇತರೆ ಭಾಗಗಳ ಮುಖಂಡರಿಗೆ ಸ್ಥಾನಮಾನ ದೊರೆಯುವಾಗ ದೇವರಹಿಪ್ಪಗಿ ಕ್ಷೇತ್ರ ಮಾತ್ರ ಏಕೆ ಹಿಂದೆ ಉಳಿಯಿತು? ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿ ಹಾಗೂ ಅವರ ಪಕ್ಷದ ಸೇವೆ ವರಿಷ್ಠರ ಗಮನಕ್ಕೆ ತಲುಪಲಿಲ್ಲವೇ? ಅಥವಾ ಸ್ಥಳೀಯ ನಾಯಕರಿಂದಲೇ ಸಮರ್ಥವಾದ ಒತ್ತಡ ನಿರ್ಮಾಣವಾಗಲಿಲ್ಲವೇ? ಎಂಬ ಪ್ರಶ್ನೆಗಳು ಎದುರಾಗಿವೆ.

ಹಿರಿತನ, ತ್ಯಾಗ, ಪಕ್ಷನಿಷ್ಠೆಗೆ ಬೆಲೆ ಇಲ್ಲವೇ?:

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದ ಬಿ.ಎಸ್.ಪಾಟೀಲ ಯಾಳಗಿ ಅವರ ರಾಜಕೀಯ ಹಿರಿತನ, ಅನುಭವ ಹಾಗೂ ಪಕ್ಷಕ್ಕಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಈ ಬಾರಿ ನಿಗಮ ಮಂಡಳಿ ಸ್ಥಾನ ನೀಡಬಹುದು ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿತ್ತು. ಆದರೆ, ಅವರಿಗೂ ಅವಕಾಶ ಸಿಗದಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ್ದರೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸರ್ಕಾರದ ಯೋಜನೆಗಳ ಮೂಲಕ ಹಾಗೂ ವೈಯಕ್ತಿಕವಾಗಿ ಸಹಾಯ-ಸಹಕಾರ ನೀಡುತ್ತಿರುವ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಅವರಿಗೂ ಸ್ಥಾನಮಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದು ಕೂಡ ಹುಸಿಯಾಗಿದೆ. ಕಾಂಗ್ರೆಸ್‌ ಪಕ್ಷ ಸಂಘಟನೆಗೆ ಕೊಡುಗೆ ನೀಡಿರುವ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡಮನಿ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ಕಳೆದ ಬಾರಿ ಸ್ಪರ್ಧಿಸಿ ಸೋತ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಗೋಳ ಸೇರಿದಂತೆ ಹಲವು ಮುಖಂಡರು ಅವಕಾಶದ ನಿರೀಕ್ಷೆಯಲ್ಲಿದ್ದರು. ಇವರೆಲ್ಲರಿಗೂ ಸ್ಥಾನ ಸಿಗದಿರುವುದು ಕ್ಷೇತ್ರದ ಕಾಂಗ್ರೆಸ್‌ ವಲಯದಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ.ಮುಂಬರುವ ಚುನಾವಣೆಗಳಲ್ಲಿ ಪರಿಣಾಮ ಬೀರುತ್ತಾ?:

ನಿಗಮ ಮಂಡಳಿ ನೇಮಕಾತಿಯಲ್ಲಿ ಅವಕಾಶ ಸಿಗದಿರುವುದು ಮುಂಬರುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರ ಶ್ರಮ, ಮುಖಂಡರ ಸಂಘಟನಾ ಶಕ್ತಿ ಬೇಕಾಗುತ್ತದೆ. ಆದರೆ, ಅಧಿಕಾರ ಮತ್ತು ಸ್ಥಾನಮಾನ ಹಂಚಿಕೆ ವೇಳೆ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಬಲಗೊಂಡರೆ ಪಕ್ಷದ ಸಂಘಟನೆಯಲ್ಲಿ ಉತ್ಸಾಹ ಕುಂದುವ ಆತಂಕವಿದೆ. ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೂ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಹಿರಿಯರಿಗೆ ಗೌರವ ನೀಡುವುದು ಹಾಗೂ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಸೂಕ್ತ ರಾಜಕೀಯ ಅವಕಾಶ ಕಲ್ಪಿಸುವುದು ಕಾಂಗ್ರೆಸ್ ನಾಯಕತ್ವದ ಮುಂದಿರುವ ಸವಾಲಾಗಿದೆ.ಕ್ಷೇತ್ರದ ಆಕಾಂಕ್ಷಿಗಳ ನಿರಾಸೆಯನ್ನು ಪಕ್ಷದ ವರಿಷ್ಠರು ಹೇಗೆ ಸರಿಪಡಿಸಲಿದ್ದಾರೆ? ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸೂಕ್ತ ಅವಕಾಶ ಕಲ್ಪಿಸಲಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಚುನಾವಣೆ ಬಂದಾಗ ಪಕ್ಷಕ್ಕಾಗಿ ದುಡಿಯುವ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆಯಲ್ಲೂ ನ್ಯಾಯ ಸಿಗಬೇಕಲ್ಲವೇ? ಎಂಬ ಪ್ರಶ್ನೆ ಈಗ ದೇವರಹಿಪ್ಪಗಿ ಕಾಂಗ್ರೆಸ್ ವಲಯದಲ್ಲಿ ಪ್ರತಿಧ್ವನಿಸುತ್ತಿದೆ. ಅಧಿಕಾರ ಕಾಂಗ್ರೆಸ್ ಕೈಯಲ್ಲಿದ್ದರೂ ಕ್ಷೇತ್ರಕ್ಕೆ ಪ್ರಾತಿನಿಧ್ಯವಿಲ್ಲದ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಸ್ಥಳೀಯ ಕಾಂಗ್ರೆಸ್ ರಾಜಕೀಯದ ದಿಕ್ಕನ್ನು ಹೇಗೆ ಬದಲಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಂಡಿರುವ ಪಕ್ಷವನ್ನು ಸಂಘಟಿಸಿ ಮುಂಬರುವ ಚುನಾವಣೆಗಳಲ್ಲಿ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಕ್ಷೇತ್ರಕ್ಕೆ ನೀಡಿದ ಪ್ರಾತಿನಿಧ್ಯ ನಮ್ಮ ಕ್ಷೇತ್ರಕ್ಕೂ ನೀಡಬೇಕಾಗಿತ್ತು. ಹಿರಿಯ ಮುತ್ಸದ್ಧಿ ರಾಜಕಾರಣಿಗಳಾದ ಬಿ.ಎಸ್.ಪಾಟೀಲ ಯಾಳಗಿ ಅವರ ಹಿರಿತನಕ್ಕೆ ಈ ಬಾರಿ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿತ್ತು. ಇನ್ನು ಸಮಯ ಅವಕಾಶವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷ ಸರಿಪಡಿಸುತ್ತೆ.

-ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ,

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕ್ಷೇತ್ರದ ಉಸ್ತುವಾರಿಗಳು ದೇವರಹಿಪ್ಪರಗಿ.ದೇವರಹಿಪ್ಪರಗಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದ ಕ್ಷೇತ್ರವಾಗಿದೆ. ಪಕ್ಷ ಸಂಘಟನೆಗೆ ನಿಗಮ ಮಂಡಳಿ ನೇಮಕಕ್ಕೆ ಸರ್ಕಾರ 425 ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಕ ಮಾಡಿ ಆದೇಶ ನೀಡಿದೆ. ಕ್ಷೇತ್ರಕ್ಕೆ ಒಂದು ಸ್ಥಾನವಾದರೂ ನೀಡಬೇಕಾಗಿತ್ತು. ಉಸ್ತುವಾರಿ ಸಚಿವರು ಹಾಗೂ ರಾಜ್ಯಾಧ್ಯಕ್ಷರಿಗೆ ಕ್ಷೇತ್ರದಿಂದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮದೇ ಆದ ರೀತಿ ಪ್ರಯತ್ನ ಮಾಡಿದ್ದಾರೆ. ಕ್ಷೇತ್ರಕ್ಕೆ ನ್ಯಾಯ ಸಿಗುವ ಭರವಸೆ ಇದೆ. ಇನ್ನೂ ಸಮಯವಿದೆ.

-ಗೌರಮ್ಮ ಮುತ್ತತ್ತಿ,
ಮಾಜಿ ಸದಸ್ಯೆ, ಜಿಲ್ಲಾ ಪಂಚಾಯತಿ ವಿಜಯಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ