ತುಮಕೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲಿಗೆ ಮನವಿ : ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ

KannadaprabhaNewsNetwork | Updated : Mar 20 2025, 11:58 AM IST

ಸಾರಾಂಶ

ತುಮಕೂರು-ಬೆಂಗಳೂರು ನಡುವೆ ಪ್ರತಿನಿತ್ಯ ಉದ್ಯೋಗ, ವ್ಯಾಪಾರ ವ್ಯವಹಾರದ ನಿಮಿತ್ತ ಒಂದು ಲಕ್ಷಕ್ಕೂಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ ಪ್ರತಿಗಂಟೆಗೆ ಒಂದರಂತೆ ರೈಲನ್ನು ಓಡಿಸಬೇಕು ಎಂದು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ  

 ತುಮಕೂರು  :  ತುಮಕೂರು-ಬೆಂಗಳೂರು ನಡುವೆ ಪ್ರತಿನಿತ್ಯ ಉದ್ಯೋಗ, ವ್ಯಾಪಾರ ವ್ಯವಹಾರದ ನಿಮಿತ್ತ ಒಂದು ಲಕ್ಷಕ್ಕೂಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ ಪ್ರತಿಗಂಟೆಗೆ ಒಂದರಂತೆ ರೈಲನ್ನು ಓಡಿಸಬೇಕು ಎಂದು ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿಕಟ ಪೂರ್ವ ಅಧ್ಯಕ್ಷ ಟಿ.ಜೆ.ಗಿರೀಶ್‌ ಹಾಗೂ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್‌ ನೈರುತ್ಯ ರೈಲ್ವೆ ಬೆಂಗಳೂರು ವಲಯ ವ್ಯವಸ್ಥಾಪಕ ಅಮಿತೇಶ್‌ ಕುಮಾರ್ ಸಿನ್ಹಾ ಅವರಿಗೆ ಮನವಿ ಮಾಡಿದರು. 

ಬುಧವಾರ ಬೆಂಗಳೂರಿನಲ್ಲಿ ನಡೆದ ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಇವರು ವಿವಿಧ ರೈಲ್ವೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಈಗಾಗಲೇ ತುಮಕೂರಿನ ನಾಗರೀಕ ಸಂಘಸಂಸ್ಥೆಗಳು ಮನವಿ ಮಾಡಿರುವಂತೆ ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಬೇಕು. 

ತುಮಕೂರು ರೈಲ್ವೆ ನಿಲ್ದಾಣದಲ್ಲಿ ವ್ಯವಸ್ಥಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಈ ನಿಲ್ದಾಣದಲ್ಲಿ ವಯೋವೃದ್ಧರು, ವಿಕಲಚೇತನರಿಗೆ ಅನುಕೂಲವಾಗುವಂತೆ ಪೋರ್ಟರ್ ಹಾಗೂ ಟ್ರಾಲಿ ವ್ಯವಸ್ಥೆ ಕಲ್ಪಿಸಲು ಕೋರಿದರು.ತುಮಕೂರಿನಿಂದ ತಿಪಟೂರಿಗೆ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಹೆಚ್ಚಿನ ರೈಲು ಸೇವೆ ಒದಗಿಸಬೇಕು. ಬೆಂಗಳೂರಿನ ಕೆಆರ್‌ಎಸ್ ನಿಲ್ದಾಣದಿಂದ ಸಂಜೆ 4.30ಕ್ಕೆ ತುಮಕೂರು ಮಾರ್ಗವಾಗಿ ಅರಸಿಕೆರೆಗೆ ಹೋಗುತ್ತಿದ್ದ ರೈಲನ್ನು ಪುನರ್ ಪ್ರಾರಂಭಿಸಬೇಕು. 

ಬೆಳಿಗ್ಗೆ 8 ಗಂಟೆಗೆ ತುಮಕೂರಿನಿಂದ ಯಶವಂತಪುರಕ್ಕೆ ಸಂಚರಿಸುವ ಮೆಮೊ ರೈಲನ್ನು ಮೆಜೆಸ್ಟಿಕ್‌ವರೆಗ ವಿಸ್ತರಿಸಿ ಅಥವಾ ಕೋಲಾರ ರೈಲನ್ನು ತುಮಕೂರು ಮೆಮೊ ರೈಲಿಗೆ ಲಿಂಕ್ ಮಾಡಿದರೆ ಮೆಜೆಸ್ಟಿಕ್ ನಿಲ್ದಾಣ ತಲುಪಲು ಅನುಕೂಲವಾಗುತ್ತದೆ.ಯಶವಂತಪುರದಿಂದ ತುಮಕೂರುವರೆಗೆ ಸಂಚರಿಸುತ್ತಿರುವ ಸಂಜೆ 5.40 ಗಂಟೆಗೆ ಬಿಡುವ ರೈಲನ್ನು ತಿಪಟೂರುವರೆಗೆ ಸಂಚರಿಸಲು ಅನುಕೂಲತೆ ಮಾಡಿಕೊಡಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಪ್ರಸ್ತುತ ಬೆಳಿಗ್ಗೆ 6.40ಕ್ಕೆ ತುಮಕೂರಿನಿಂದ ಶಿವಮೊಗ್ಗ ನಡುವೆ ಸಂಚರಿಸುವ ಪ್ಯಾಸೆಂಜರ್‌ ರೈಲಿಗೆ ಲಿಂಕ್‌ ಅಥವಾ ಮೆಮೊ ರೈಲನ್ನು ತುಮಕೂರಿನಿಂದ ಅರಸಿಕೆರೆವರೆಗೆ ಬಿಟ್ಟರೆ ಬೆಂಗಳೂರು, ಯಶವಂತಪುರ,ನಿಡವಂದ, ದಾಬಸ್‌ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಜನರು ಹಾಗೂ ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ. ಸಂಜೆ 5.40ಕ್ಕೆ ಯಶವಂತಪುರದಿಂದ ತುಮಕೂರಿಗೆ ಸಂಚರಿಸುವ ಮೆಮೊ ರೈಲು ಸಂಜೆ 5.40ರ ಬದಲಾಗಿ ಸಂಜೆ 6 ಗಂಟೆಗೆ ಬದಲಾಯಿಸಿಕೊಟ್ಟರೆ ನಿತ್ಯಾ ಸಂಚಾರ ಮಾಡುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಟಿ.ಜೆ.ಗಿರೀಶ್ ಹಾಗೂ ಕರಣಂ ರಮೇಶ್ ಅಧಿಕಾರಿಗಳಿಗೆ ವಿನಂತಿಸಿದರು.

Share this article