ಡೊಂಗ್ರಿ ಸುಂಕಸಾಳ ಸೇತುವೆ ಶೀಘ್ರ ಪೂರ್ಣಗೊಳಿಸಲು ಮನವಿ

KannadaprabhaNewsNetwork |  
Published : Jan 12, 2025, 01:15 AM IST
ಡೊಂಗ್ರಿ ಸುಂಕಸಾಳ ಸೇತುವೆ ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಡೋಂಗ್ರಿ ಮತ್ತು ಸುಂಕಸಾಳ ನಡುವಿನ ನಿರ್ಮಾಣ ಹಂತದಲ್ಲಿರುವ ಸೇತುವೆಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಲೋಕೋಪಯೋಗಿ ಮತ್ತು ಒಳನಾಡು ಬಂದರು ಮತ್ತು ಜಲಸಾರಿಗೆ ಇಲಾಖೆ ಅಭಿಯಂತರರಿಗೆ ಮನವಿ ಸಲ್ಲಿಸಿದರು.

ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಡೋಂಗ್ರಿ ಮತ್ತು ಸುಂಕಸಾಳ ನಡುವಿನ ನಿರ್ಮಾಣ ಹಂತದಲ್ಲಿರುವ ಸೇತುವೆಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಲೋಕೋಪಯೋಗಿ ಮತ್ತು ಒಳನಾಡು ಬಂದರು ಮತ್ತು ಜಲಸಾರಿಗೆ ಇಲಾಖೆ ಅಭಿಯಂತರರಿಗೆ ಮನವಿ ಸಲ್ಲಿಸಿದರು.

ಡೋಂಗ್ರಿ ಗ್ರಾಪಂನ ಡೋಂಗ್ರಿ ಗ್ರಾಮದಿಂದ ಸುಂಕಸಾಳ ಸಂಪರ್ಕಿಸುವ ಏಕೈಕ ಸಾಧನವಾದ ಡೋಂಗ್ರಿ- ಸುಂಕಸಾಳ ತೂಗುಸೇತುವೆ 2019ರ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಸರ್ಕಾರ ಹೊಸ ಸೇತುವೆ ಮಂಜೂರು ಮಾಡಿತು. ಆದರೆ ಕಾಮಗಾರಿ ಪ್ರಾರಂಭದಿಂದಲೂ ಕುಂಟುತ್ತಾ ಸಾಗುತ್ತಿದೆ. ಸೇತುವೆಯ ಕನಸು ಕಾಣುತ್ತಿರುವ ಜನರಿಗೆ ತುಂಬಾ ನಿರಾಸೆಯಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ಡೋಂಗ್ರಿ, ಬಿದ್ರಳ್ಳಿ, ಹೆಗ್ಗರಣಿ ಭಾಗದ ಪ. ಪಂಗಡದ ಜನಾಂಗ ಹಾಗೂ ಈ ಭಾಗದ ನಾಗರಿಕರಿಗೆ ತುಂಬಾ ಅನನುಕೂಲವಾಗಿದೆ. ಜನರು ಪ್ರತಿನಿತ್ಯವೂ ಸುತ್ತು ಬಳಸಿ ಸಂಚಾರ ಮಾಡಬೇಕಾದ ಅನಿವಾರ್ಯತೆಯನ್ನು ಉಂಟು ಮಾಡಿದೆ. ಈ ಭಾಗದಲ್ಲಿ ಶೇ. 100ರಷ್ಟು ರೈತ ಕುಟುಂಬಗಳೇ ಇವೆ. ಈ ರೈತರಿಗೆ ತಮ್ಮ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು, ಗೊಬ್ಬರ ತರಲು ಹಾಗೂ ಇನ್ನಿತರ ವ್ಯವಹಾರಗಳಿಗೆ ಈಗ ತುಂಬಾ ಕಷ್ಟವಾಗುತ್ತಿದೆ.

ಈ ಭಾಗದಲ್ಲಿನ ಅನೇಕ ಮಕ್ಕಳಿಗೆ ಶಿಕ್ಷಣಕ್ಕಾಗಿ ಸುಂಕಸಾಳ, ಅಗಸೂರು, ಅಂಕೋಲಾ ಮುಂತಾದೆಡೆ ದಿನವೂ ತೆರಳಬೇಕಾದ ಅನಿವಾರ್ಯತೆಯಿದೆ. ಸಂಚಾರದ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವುದರಿಂದ ಅನೇಕ ಮಕ್ಕಳು ಶಾಲಾ ಶಿಕ್ಷಣವನ್ನೇ ಮೊಟಕುಗೊಳಿಸಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಬಗ್ಗೆ ಅಮೂಲಾಗ್ರವಾಗಿ ಪರಿಶೀಲಿಸಿ ಡೋಂಗ್ರಿ, ಸುಂಕಸಾಳ ನಡುವಿನ ಸೇತುವೆಯ ನಿರ್ಮಾಣ ಕಾರ್ಯವನ್ನು ಮುಂದುವರಿಸಿ, ಈ ಭಾಗದ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ. ಈ ನಮ್ಮ ಬೇಡಿಕೆ ತಕ್ಷಣ ಈಡೇರದೇ ಇದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗ್ರಾಮಸ್ಥರಾದ ವಿ.ಎಸ್. ಭಟ್ಟ ಕಲ್ಲೇಶ್ವರ, ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷ ಸಂಜಯ ನಾಯ್ಕ, ನಾರಾಯಣ ಹೆಗಡೆ, ಧನಂಜಯ ನಾಯ್ಕ, ಮಂಜುನಾಥ ಸಿದ್ದಿ, ಪ್ರಕಾಶ ನಾಯ್ಕ, ಲೋಕೇಶ್ ನಾಯ್ಕ, ಮಹೇಶ್ ಡಿ. ನಾಯ್ಕ, ಶಂಕರ ನಾಯ್ಕ, ದಿನಕರ ನಾಯ್ಕ, ಲೋಕನಾಥ ನಾಯ್ಕ, ಮಹೇಂದ್ರ ನಾಯ್ಕ, ಗುರು ಆರ್. ನಾಯ್ಕ, ಸೋಮೇಶ್ವರ ನಾಯ್ಕ, ಗುರು ಯು. ನಾಯ್ಕ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು