ಹೊಸಪೇಟೆ: ಈ ಭಾಗದ ವಿವಿಧ ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಶನಿವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಮನವಿ ಪತ್ರ ಸಲ್ಲಿಸಿದರು.
ನಗರದಲ್ಲಿ ಹಾದು ಹೋಗುವ ರೈಲು ಮಾರ್ಗದ ಕೆಲವು ಕಡೆ ಮೇಲ್ಸೇತುವೆ ಅಗತ್ಯವಾಗಿದೆ. ಹೆಚ್ಚಾಗುತ್ತಿರುವ ವಾಹನಗಳ ಸುಗಮ ಸಂಚಾರ ಮತ್ತು ಜನರ ಸುರಕ್ಷತಾ ದೃಷ್ಟಿಯಿಂದ ಎಲ್.ಸಿ. ಗೇಟ್ ನಂ. 10 ಜಿಲ್ಲಾಧಿಕಾರಿ ಕಚೇರಿ ಹತ್ತಿರ ಟಿಬಿ ಡ್ಯಾಂ ಕಡೆಗೆ ಹೋಗುವ ರೈಲು ಮಾರ್ಗ, ಎಲ್.ಸಿ. ಗೇಟ್ ನಂ. 4 ಚಿತ್ತವಾಡ್ಗಿ ಐಎಸ್ಆರ್ ಫ್ಯಾಕ್ಟರಿಗೆ ಹತ್ತಿರ, ಎಲ್.ಸಿ. ಗೇಟ್ ನಂ. 83 ಹೊಸಪೇಟೆ ರೈಲ್ವೆ ನಿಲ್ದಾಣದ ಪೂರ್ವ ದಿಕ್ಕಿನಲ್ಲಿರುವ ನಂ. 88- ಮುದ್ಲಾಪುರ ಗೇಟ್, ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಂದಗತಿಯಲ್ಲಿ ಸಾಗಿದ್ದು, ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ರೈಲ್ವೆ ಮಾರ್ಗದ ಎರಡೂ ಕಡೆ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ವಿಜಯಪುರ-ಯಶವಂತಪುರ ರೈಲನ್ನು ಕಾಯಂಗೊಳಿಸಿ ಪ್ರಯಾಣ ದರ ಇಳಿಸಬೇಕು. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಮಂತ್ರಾಲಯ, ಹೈದರಾಬಾದ್ ಕಡೆಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕೆ ಸಂಚಾರ ರದ್ದಾಗಿರುವ ಬೆಳಗಾವಿ-ಮಣಗುರು ರೈಲು ಪುನಾರಂಭಿಸಬೇಕು. ಹೊಸಪೇಟೆ-ತುಮಕೂರು ನಡುವೆ ನೂತನ ರೈಲು ಪ್ರಾರಂಭಿಸಬೇಕು. ಹೊಸಪೇಟೆಯಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ಹಾಗೂ ತುಮಕೂರಿನಿಂದ ಹೊಸಪೇಟೆಗೆ ರಾತ್ರಿ ಹಿಂದಿರುಗುವ ನೂತನ ರೈಲಿನ ಅವಶ್ಯಕತೆ ಇದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಭರಮನಗೌಡ, ವೈ. ಯಮುನೇಶ, ಮಹೇಶ ಕುಡುತಿನಿ, ಅರವಿಂದ ಜಾಲಿ, ದೀಪಕ, ವಿಶ್ವನಾಥ ಕೌತಾಳ್ ಮತ್ತಿತರರಿದ್ದರು.